ಬಿಜಾಪುರ (ಛತ್ತೀಸ್‌ಗಢ ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ನಕ್ಸಲರು ಅಳವಡಿಸಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
‘ಉಸೂರ್ ಠಾಣಾ ವ್ಯಾಪ್ತಿಯ ನಡಪಲ್ಲಿ ಗ್ರಾಮದ ನಿವಾಸಿ ಜೋಗಿ ಅವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲೆಂದು ಬುಧವಾರ ಕಾಡಿಗೆ ತೆರಳಿದ್ದರು. ಆಗ ದಾರಿ ಮಧ್ಯದಲ್ಲಿ ನಕ್ಸಲರು ಹೂತಿದ್ದ ಕಚ್ಚಾ ಬಾಂಬ್ ಅನ್ನು ಆಕಸ್ಮಿಕವಾಗಿ ತುಳಿದಿದ್ದು, ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಜೋಗಿ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬಿಜಾಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ, ನಿರ್ಮಾಣ ಹಂತದ ಸೇತುವೆಗಳು, ಕಾಲುದಾರಿಗಳು ಸೇರಿದಂತೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುವ ಸ್ಥಳಗಳಲ್ಲಿ ನಕ್ಸಲರು ಕಚ್ಚಾ ಬಾಂಬ್ ಅಳವಡಿಸಿ ದಾಳಿ ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಎರಡೂವರೆ ತಿಂಗಳಿನಲ್ಲಿ ಬಿಜಾಪುರ್ ಜಿಲ್ಲೆಯಾದ್ಯಂತ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.