ಕಬೀರ್‌ಧಾಮ್: ಮೂರು ರಾಜ್ಯಗಳಿಗೆ ಬೇಕಾಗಿದ್ದ ಮಹಿಳಾ ನಕ್ಸಲ್ ಹಿಡ್ಮೆ ಕೊವಾಸಿ ಅಲಿಯಾಸ್ ರನಿತಾ (22) ಅವರು ಛತ್ತೀಸಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರನಿತಾ ಅವರ ಪತ್ತೆಗೆ ಶೋಧ ನಡೆಸುತ್ತಿದ್ದ ವಿವಿಧ ರಾಜ್ಯಗಳು, ಅವರ ಬಗ್ಗೆ ಸುಳಿವು ನೀಡಿದವರಿಗೆ ಒಟ್ಟು ₹ 13 ಲಕ್ಷ ಬಹುಮಾನ ಘೋಷಿಸಿದ್ದವು.
ಛತ್ತೀಸಗಢ, ಮಹಾರಾಷ್ಟ್ರ ರಾಜ್ಯಗಳು ತಲಾ ₹ 5 ಲಕ್ಷ ಹಾಗೂ ಮಧ್ಯಪ್ರದೇಶ ₹ 3 ಲಕ್ಷವನ್ನು ಅವರ ತಲೆಗೆ ಬಹುಮಾನವಾಗಿ ಪ್ರಕಟಿಸಿದ್ದವು. ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ನಡೆದ ಮಾವೋವಾದಿ ಹಿಂಸಾಚಾರ ಸೇರಿದಂತೆ 19 ಘಟನೆಗಳಲ್ಲಿ ಹಾಗೂ ಛತ್ತೀಸಗಢದ ಖೈರಗಢ– ಚುಇಖದಾನ್– ಗಂಡೈ ಜಿಲ್ಲೆಯ ಹಿಂಸಾಚಾರಗಳಲ್ಲೂ ರನಿತಾ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯ ನಕ್ಸಲರು ನಡೆಸುವ ದೌರ್ಜನ್ಯ ಮತ್ತು ಮಾವೊ ಸಿದ್ಧಾಂತದಿಂದ ಬೇಸತ್ತು ರನಿತಾ ಅವರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದಾರೆ. ಅವರಿಗೆ ರಾಜ್ಯ ಪುನರ್ವಸತಿ ನೀತಿಯ ಅಡಿ ₹ 25,000 ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.