ಅರ್ರಾ, ಬಿಹಾರ (ಪಿಟಿಐ): ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬನ್ನು ಥಳಿಸಿದ ಗುಂಪೊಂದು, ಆಕೆಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದೆ.
ಉದ್ರಿಕ್ತ ಗುಂಪು, ಆ ಪ್ರದೇಶದಲ್ಲಿ ಸಾಗುತ್ತಿದ್ದ ರೈಲಿನ ಮೇಲೂ ಕಲ್ಲು ತೂರಿದೆ ಎಂದು ಭೋಜಪುರ ಎಸ್ಪಿ ಅವಕಾಶ್ ಕುಮಾರ್ ತಿಳಿಸಿದ್ದಾರೆ.
ಬಿಹಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಹಿಳೆಗೆ ಹೀಗೆ ಅವಮಾನ ಮಾಡಲಾಗಿದೆ. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಗ್ರಾಮಸ್ಥರೂ ಗುಂಡು ಹಾರಿಸಿದ್ದಾರೆ.
ದಾಮೋದರಪುರದ ವಿಮಲೇಶ್ ಸಹಾ (19) ಎಂಬುವರ ಮೃತದೇಹ ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿತ್ತು. ಪಕ್ಕದಲ್ಲಿಯೇ ವೇಶ್ಯಾವಾಟಿಕೆ ಚಟುವಟಿಕೆ ನಡೆಯುವ ಪ್ರದೇಶವಿದ್ದು, ಅಲ್ಲಿನ ನಿವಾಸಿಗಳ ಮೇಲೆ ಯುವಕನ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಲ್ಲದೆ, ಆ ಪ್ರದೇಶದಲ್ಲಿನ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಹಲವರ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಮನೆಯೊಂದರಲ್ಲಿದ್ದ ಮಹಿಳೆಯನ್ನು ಹೊರಗೆಳೆದ ಗುಂಪು, ಆಕೆಯನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.