ADVERTISEMENT

ಹೈದರಾಬಾದ್‌: ಚಲಿಸುವ ಬಸ್‌ನಲ್ಲಿ ಮಹಿಳೆ ಮೇಲೆ ಚಾಲಕನಿಂದ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:21 IST
Last Updated 30 ಜುಲೈ 2024, 15:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ತೆಲಂಗಾಣದ ನಿರ್ಮಲ್ ಪಟ್ಟಣದಿಂದ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಕಂಪನಿಯ ‘ಸ್ಲೀಪರ್ ಬಸ್’ನಲ್ಲಿ ಮಹಿಳೆಯೊಬ್ಬರ ಮೇಲೆ ಬಸ್ ಚಾಲಕ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಬಸ್‌ನಲ್ಲಿ 36 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. 

ಸೋಮವಾರ ತಡರಾತ್ರಿ ಬಸ್ ಮೆಡ್ಚಲ್ ಎಂಬಲ್ಲಿಗೆ ತಲುಪಿದಾಗ ಚಾಲಕ ಮಹಿಳೆಯ ಮೇಲೆ ಈ ಕೃತ್ಯವೆಸಗಿದ್ದು, ಆರೋಪಿ ಕೈಯಿಂದ ತಪ್ಪಿಸಿಕೊಂಡ ಮಹಿಳೆ ಅಳಲು ತೋಡಿಕೊಳ್ಳುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಸಂತ್ರಸ್ತ ಮಹಿಳೆಯು ಸಹ ಪ್ರಯಾಣಿಕರ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. 

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ‘ಆರೋಪಿ ಕೃಷ್ಣ ಎಂಬಾತ ಖಾಸಗಿ ಟ್ರಾವೆಲ್ ಕಂಪನಿಯಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ. ಸಂತ್ರಸ್ತೆ ತನ್ನ 6 ವರ್ಷದ ಮಗಳ ಜೊತೆಗೆ ಪ್ರಕಾಶಂ ಜಿಲ್ಲೆಯಿಂದ ಪಮುರು ಎಂಬಲ್ಲಿಗೆ ತೆರಳುತ್ತಿದ್ದರು. ಇದಕ್ಕಾಗಿ ಮಹಿಳೆಯು ಒಂದು ಬರ್ತ್‌ನ ಆಸನವನ್ನು ಕಾಯ್ದಿರಿಸಿದ್ದರು. ಆದರೆ, ಮಹಿಳೆ ಮತ್ತು ಆಕೆಯ ಮಗುವನ್ನು ಆರೋಪಿಯು ಎರಡು ಬರ್ತ್ ಇರುವ ಆಸನಕ್ಕೆ ಕಳುಹಿಸಿದ್ದ. ರಾತ್ರಿ ಊಟ ಮುಗಿಸಿದ ಬಳಿಕ ಬಸ್ ಚಾಲನೆ ಮಾಡುವ ಜವಾಬ್ದಾರಿಯನ್ನು ಆರೋಪಿ ಕೃಷ್ಣ ಎರಡನೇ ಚಾಲಕನಿಗೆ ವಹಿಸಿದ್ದ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಮಲಗಿದ್ದಾಗ, ಸಂತ್ರಸ್ತೆ ಬಳಿ ಹೋದ ಆರೋಪಿಯು, ಬೆಡ್‌ಶೀಟ್‌ನಿಂದ ಮಹಿಳೆಯ ಬಾಯಿ ಮುಚ್ಚಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ’ ಎಂದು ತಿಳಿಸಿದ್ದಾರೆ. 

ADVERTISEMENT

ಮಹಿಳೆ ತನ್ನ ಬಾಯಿಯಲ್ಲಿ ತುರುಕಿದ ಬೆಡ್‌ಶೀಟ್ ತೆಗೆದು ಕಿರುಚಾಡುವಷ್ಟರಲ್ಲಿ ಆರೋಪಿ ಕೃಷ್ಣ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮತ್ತೊಬ್ಬ ಚಾಲಕ ಮತ್ತು ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಬಸ್ ಅನ್ನು ಜಪ್ತಿ ಮಾಡಿ, ತನಿಖೆ ಕೈಗೊಂಡಿದ್ದಾರೆ. 

ಟೆಕಿ ಮೇಲೆ ಸಾಮೂಹಿಕ ಅತ್ಯಾಚಾರ: ಮತ್ತೊಂದೆಡೆ ಸೋಮವಾರ ರಾತ್ರಿ ಹೈದರಾಬಾದ್‌ನ ವನಸ್ಥಲಿಪುರಂ ಬಳಿಯ ಓಂಕಾರ್ ನಗರದಲ್ಲಿ 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇಬ್ಬರ ಪೈಕಿ ಸಂತ್ರಸ್ತೆಯ ಬಾಲ್ಯ ಸ್ನೇಹಿತನೂ ಒಬ್ಬ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಹೊಸ ಕೆಲಸ ಸಿಕ್ಕ ಕಾರಣಕ್ಕಾಗಿ ಸಂತ್ರಸ್ತ ಯುವತಿ ಸ್ಥಳೀಯ ಬಾರ್ ಒಂದರಲ್ಲಿ ಸ್ನೇಹಿತರಿಗೆ ಔತಣ ನೀಡಿದ್ದರು. ಈ ವೇಳೆ ಸಂತ್ರಸ್ತೆಯು ತನ್ನ ಬಾಲ್ಯ ಸ್ನೇಹಿತ ಗೌತಂ ರೆಡ್ಡಿ ಮತ್ತು ಆತನ ಸ್ನೇಹಿತ ಪಾನಮತ್ತ ಮಾಡಿದ್ದರು. ಆ ಬಳಿಕ ಕೊಠಡಿಗೆ ತೆರಳಿದಾಗ ಈ ಇಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.