ಕೊಟ್ಟಾಯಂ : ಟಿವಿ ವಾಹಿನಿಯ ಸಂದರ್ಶವೊಂದರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಉಮನ್ ಚಾಂಡಿ ಅವರನ್ನು ಹೊಗಳಿದ್ದಕ್ಕೆ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಕೇರಳ ಎಲ್‌ಡಿಎಫ್ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದೆ.
ಪುತ್ತುಪ್ಪಳ್ಳಿ ವಿಧಾನಸಭಾ ಕ್ಷೇತ್ರದ ಪಶುವೈದ್ಯಕೀಯ ಆಸ್ಪತ್ರೆಯೊಂದರಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಸತಿ ಅಮ್ಮ ಎಂಬುವವರು ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಉಮನ್ ಚಾಂಡಿ ಅವರನ್ನು ಹೊಗಳಿದ್ದ ಮಹಿಳೆ, ಉಪಚುನಾವಣೆಯಲ್ಲಿ ಚಾಂಡಿ ಅವರ ಮಗ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದರು.
ವಾಹಿನಿಯಲ್ಲಿ ಸಂದರ್ಶನ ಪ್ರಸಾರವಾದ ಒಂದು ವಾರದಲ್ಲಿಯೇ ಮಹಿಳೆಗೆ ಕೆಲಸಕ್ಕೆ ಬಾರದಂತೆ ಪಶುಸಂಗೋಪನಾ ಇಲಾಖೆ ತಿಳಿಸಿತ್ತು ಎನ್ನಲಾಗಿದೆ.
ಸರ್ಕಾರದ ವಿರುದ್ಧ ಮಾತನಾಡಿದರವರಿಗೆಲ್ಲ ಇದೇ ಗತಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಮನ್ ಚಾಂಡಿ ಅವರ ಮಗ ಚಾಂಡಿ ಉಮನ್, ‘ಕೇರಳದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರೋಪ ತಳ್ಳಿಹಾಕಿದ ಪಶುಸಂಗೋಪನಾ ಸಚಿವೆ
ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ, ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.
‘ವಾಸ್ತವದಲ್ಲಿ ಕೆಲಸಕ್ಕೆ ನೇಮಕಗೊಂಡ ಅಧಿಕೃತ ವ್ಯಕ್ತಿಯ ಜಾಗದಲ್ಲಿ ಸತಿ ಎಂಬುವವರು ಕೆಲಸ ಮಾಡುತ್ತಿರುವುದನ್ನು ಉಪನಿರ್ದೇಶಕರು ಪತ್ತೆ ಮಾಡಿದ್ದರು. ಹೀಗಾಗಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಉಮನ್ ಚಾಂಡಿ ಅವರನ್ನು ಹೊಗಳಿದ್ದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸಚಿವೆ ತಿಳಿಸಿದ್ದಾರೆ.
ಉಮನ್ ಚಾಂಡಿ ಅವರ ನಿಧನದ ನಂತರ ತೆರವಾಗಿದ್ದ ಪುತ್ತುಪ್ಪಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಇದೇ ಸೆಪ್ಟೆಂಬರ್ 11ರಂದು ಉಪಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.