ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಾಕು ನಾಯಿಯನ್ನು ಮರಕ್ಕೆ ನೇತುಹಾಕಿ ಕೊಂದ ಆರೋಪದ ಮೇಲೆ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಮುಲ್ಶಿ ತಹಸಿಲ್‌ನ ಪಿರಂಗುಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪ್ರಭಾವತಿ ಜಗತಾಪ್ ಮತ್ತು ಅವರ ಪುತ್ರ ಓಂಕಾರ್ ಜಗತಾಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಕುರಿತು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಕೃತ್ಯಕ್ಕೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪುಣೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಮಿಷನ್ ಪಾಸಿಬಲ್ ಫೌಂಡೇಶನ್ ಎಂಬ ನಾಯಿಗಳ ಆಶ್ರಯಧಾಮ ನಡೆಸುತ್ತಿರುವ ಪ್ರಾಣಿ ಕಾರ್ಯಕರ್ತೆ ಪದ್ಮಿನಿ ಸ್ಟಂಪ್ ಅವರು ತಾಯಿ ಮತ್ತು ಮಗನ ವಿರುದ್ಧ ಪುಣೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
‘ಅಕ್ಟೋಬರ್ 22ರಂದು ಪ್ರಭಾವತಿ ಅವರು ತಮ್ಮ ಸಾಕು ನಾಯಿಯ ಮೇಲೆ ಕೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಬಳಿಕ ಅವರ ಮಗ ಓಂಕಾರ್ ಆ ನಾಯಿಯನ್ನು ಮರಕ್ಕೆ ನೇತು ಹಾಕಿದ್ದಾನೆ. ಘಟನೆ ಕುರಿತು ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ ಗಿರಿಗೋಸಾವಿ ಹೇಳಿದ್ದಾರೆ.
‘ನಾಯಿಯನ್ನು ಕೊಲ್ಲುವ ಮೊದಲು, ಕುಟುಂಬವು ನಾಯಿಯನ್ನು ತೆಗೆದುಕೊಂಡು ಹೋಗುವಂತೆ ಶ್ವಾನ ಪ್ರಿಯರೊಬ್ಬರಿಗೆ ಕರೆ ಮಾಡಿ ತಿಳಿಸಿದೆ. ಆದರೆ, ಬಳಿಕ ಮರದಲ್ಲಿ ನೇತಾಡುತ್ತಿರುವ ನಾಯಿಯ ಚಿತ್ರವನ್ನು ಕಳುಹಿಸಿದ್ದಾರೆ. ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿ ಕೃತ್ಯದ ಕುರಿತು ದೂರು ದಾಖಲಿಸಿದ್ದೇವೆ’ ಎಂದು ಪದ್ಮಿನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.