ಲಖನೌ (ಉತ್ತರ ಪ್ರದೇಶ): ಇವೈ ಕಂಪನಿ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಸಾವಿನ ಸುದ್ದಿ ಚರ್ಚೆಯಾಗುತ್ತಿರುವುದರ ಬೆನ್ನಲ್ಲೇ ಕೆಲಸ ಒತ್ತಡದಿಂದ ಇಲ್ಲಿನ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ(ಸೆ.24) ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಸದಾಫ್ ಫಾತಿಮಾ ಎಂದು ಗುರುತಿಸಲಾಗಿದೆ. ಗೋಮ್ತಿನಗರದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಬೂತಿ ಖಂಡ್ ಶಾಖೆಯಲ್ಲಿ ಹೆಚ್ಚುವರಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕೆಲಸದ ಒತ್ತಡದಿಂದ ಫಾತಿಮಾ ಸಾವನ್ನಪ್ಪಿದ್ದಾರೆ ಎಂದು ಆಕೆಯ ಸಹೋದ್ಯೋಗಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ.
ಮಂಗಳವಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಫಾತಿಮಾ ಅವರು ಕುರ್ಚಿಯಿಂದ ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿಕೊಡಲಾಯಿತು ಎಂದು ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ.
ಫಾತಿಮಾ ಸಾವಿನ ಕುರಿತು ಆತಂಕ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಬಿಜೆಪಿಯ ವಿಫಲ ಆರ್ಥಿಕ ನೀತಿಗಳಿಂದ ಕಂಪನಿಗಳು ಕಷ್ಟದಲ್ಲಿ ಸಿಲುಕಿವೆ. ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಕಂಪನಿಗಳು ಕಡಿಮೆ ಜನರಿಂದ ಹೆಚ್ಚು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿವೆ. ಇಂತಹ ಹಠಾತ್ ಸಾವುಗಳಿಗೆ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ’ ಎಂದು ಕಿಡಿಕಾರಿದ್ದಾರೆ.
ಪುಣೆಯ ‘ಅರ್ನ್‌ಸ್ಟ್ ಆ್ಯಂಡ್ ಯಂಗ್’ (ಇವೈ) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೊಚ್ಚಿಯ ನಿವಾಸಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ (26) ಅವರು ಜುಲೈ 20ರಂದು ಮೃತಪಟ್ಟಿದ್ದರು. ಅತಿಯಾದ ಕೆಲಸದ ಒತ್ತಡದಿಂದ ತನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಅನ್ನಾ ಅವರ ತಾಯಿ ಅನಿತಾ ಅವರು ಕಂಪನಿಗೆ ಪತ್ರ ಬರೆದಿದ್ದು, ಅದು ಬಹಿರಂಗವಾಗಿ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.