ADVERTISEMENT

ಸ್ತ್ರೀಧನ | ಪತಿಗೆ ಇಲ್ಲ ಹಕ್ಕು: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:23 IST
Last Updated 25 ಏಪ್ರಿಲ್ 2024, 16:23 IST
<div class="paragraphs"><p>  ಸುಪ್ರೀಂ ಕೋರ್ಟ್</p><p> </p></div>

ಸುಪ್ರೀಂ ಕೋರ್ಟ್

   

–ಪಿಟಿಐ ಚಿತ್ರ

ADVERTISEMENT

ನವದೆಹಲಿ: ‘ಸ್ತ್ರೀಧನ’ವು ಮಹಿಳೆಯ ಆಸ್ತಿಯಾಗಿದ್ದು, ಅದರ ಮೇಲೆ ಆಕೆಗೆ ಪರಿಪೂರ್ಣವಾದ ಹಕ್ಕು ಇದೆ. ಅದನ್ನು ಆಕೆ ತನಗೆ ಇಷ್ಟಬಂದ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಈ ಆಸ್ತಿಯು ಎಂದಿಗೂ ಪತಿಯ ಜೊತೆಗಿನ ಜಂಟಿ ಆಸ್ತಿ ಆಗದು. ‘ಸ್ತ್ರೀಧನ’ವನ್ನು ಪತಿಯು ಕಷ್ಟದ ಪರಿಸ್ಥಿತಿಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಆದರೆ ಆ ಆಸ್ತಿಯನ್ನು ಪತ್ನಿಗೆ ಹಿಂದಿರುಗಿಸುವ ನೈತಿಕ ಹೊಣೆ ಪತಿಗೆ ಇದೆ ಎಂದು ಕೂಡ ಕೋರ್ಟ್‌ ಸ್ಪಷ್ಟಪಡಿಸಿದೆ.

ಪತ್ನಿಯ ಅಷ್ಟೂ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದ ಪತಿಯು, ಪತ್ನಿಗೆ ಹಣಕಾಸಿನ ಪರಿಹಾರದ ರೂಪದಲ್ಲಿ ₹25 ಲಕ್ಷ ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ವಿಭಾಗೀಯ ಪೀಠವು ಸೂಚಿಸಿದೆ.  

ಈ ಪ್ರಕರಣದಲ್ಲಿ ಮಹಿಳೆಯು, ‘ಮದುವೆಯ ಸಂದರ್ಭದಲ್ಲಿ 89 ಸವರನ್ ಚಿನ್ನವನ್ನು ನನ್ನ ತವರಿನ ಕಡೆಯವರು ನನಗೆ ಉಡುಗೊರೆಯಾಗಿ ನೀಡಿದ್ದರು. ಅಲ್ಲದೆ, ಮದುವೆಯ ನಂತರದಲ್ಲಿ ನನ್ನ ತಂದೆಯು ₹2 ಲಕ್ಷ ಮೌಲ್ಯದ ಚೆಕ್‌ಅನ್ನು ಪತಿಗೆ ನೀಡಿದ್ದರು’ ಎಂದು ಹೇಳಿದ್ದರು.

‘ಮದುವೆಯ ಮೊದಲ ರಾತ್ರಿಯ ದಿನ ಪತಿಯು ಎಲ್ಲ ಚಿನ್ನಾಭರಣಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡ. ಅವುಗಳನ್ನು ಸುರಕ್ಷಿತವಾಗಿ ಇರಿಸುವ ಹೆಸರಿನಲ್ಲಿ ತನ್ನ ತಾಯಿಗೆ ಹಸ್ತಾಂತರಿಸಿದ. ಪತಿ ಮತ್ತು ಆತನ ತಾಯಿ ತಮ್ಮ ಹಳೆಯ ಹಣಕಾಸಿನ ಹೊರೆಗಳನ್ನು ಇಳಿಸಿಕೊಳ್ಳಲು ಆ ಚಿನ್ನಾಭರಣಗಳನ್ನು ದುರ್ಬಳಕೆ ಮಾಡಿಕೊಂಡರು’ ಎಂಬುದು ಮಹಿಳೆಯ ಆರೋಪ.

ಈ ಪ್ರಕರಣದ ಕುರಿತಾಗಿ 2011ರಲ್ಲಿ ಆದೇಶ ನೀಡಿದ್ದ ಕೌಟುಂಬಿಕ ನ್ಯಾಯಾಲ‍ಯವು, ಪತಿ ಮತ್ತು ತಾಯಿ ಆ ಚಿನ್ನಾಭರಣಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಜ ಎಂದು ಹೇಳಿತ್ತು. ಅಲ್ಲದೆ, ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಮಹಿಳೆಯು ಹೊಂದಿದ್ದಾಳೆ ಎಂದಿತ್ತು. ಆದರೆ, ಚಿನ್ನಾಭರಣಗಳನ್ನು ಪತಿ ಮತ್ತು ಆತನ ತಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಸಾಬೀತು ಮಾಡಲು ಮಹಿಳೆಗೆ ಸಾಧ್ಯವಾಗಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿತ್ತು.

ಇದನ್ನು ಪ್ರಶ್ನಿಸಿ ಮಹಿಳೆಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಸ್ತ್ರೀಧನವು ಪತಿ–ಪತ್ನಿಯ ಜಂಟಿ ಆಸ್ತಿಯಾಗುವುದಿಲ್ಲ. ಪತಿಗೆ ಈ ಆಸ್ತಿಯ ಮೇಲೆ ಸ್ವತಂತ್ರ ಒಡೆತನ ಇರುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

‘ಮಹಿಳೆಗೆ ಮದುವೆಯ ಮೊದಲು, ಮದುವೆಯ ಸಂದರ್ಭದಲ್ಲಿ ಅಥವಾ ತವರಿನಿಂದ ಕಳಿಸಿಕೊಡುವಾಗ ನೀಡುವ ಆಸ್ತಿಯು ಆಕೆಯ ಸ್ತ್ರೀಧನ ಆಸ್ತಿಯಾಗುತ್ತದೆ. ಆ ಆಸ್ತಿಯ ಮೇಲೆ ಆಕೆಗೆ ಪರಿಪೂರ್ಣ ಹಕ್ಕಿರುತ್ತದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.