ADVERTISEMENT

ಸಿಜೆಐಗೆ ಕ್ಲೀನ್‌ಚಿಟ್‌: ವಕೀಲೆಯರ ಪ್ರತಿಭಟನೆ

ಪಿಟಿಐ
Published 7 ಮೇ 2019, 20:00 IST
Last Updated 7 ಮೇ 2019, 20:00 IST
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಕ್ಲೀನ್‌ ಚಿಟ್‌ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಹೊರಗೆ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದರು –ರಾಯಿಟರ್ಸ್‌ ಚಿತ್ರ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಕ್ಲೀನ್‌ ಚಿಟ್‌ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಹೊರಗೆ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದರು –ರಾಯಿಟರ್ಸ್‌ ಚಿತ್ರ   

ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ನೀಡಿರುವುದನ್ನ ವಿರೋಧಿಸಿಸುಪ್ರೀಂ ಕೋರ್ಟ್‌ ಹೊರಗೆ ಮಹಿಳಾ ವಕೀಲರು, ಸಾಮಾಜಿಕ ಹೋರಾಟಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಹಿಳಾ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮೂವರು ಪುರುಷರು ಸೇರಿ 55 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಪ್ರಕರಣದ ತನಿಖೆ ನಡೆಸಿ ಆಂತರಿಕ ತನಿಖಾ ಸಮಿತಿಯು, ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿ ನೀಡಿರುವ ಈ ದೂರಿನಲ್ಲಿ ಹುರುಳಿಲ್ಲ ಎಂದು ಸೋಮವಾರ ವರದಿ ನೀಡಿ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು.

ADVERTISEMENT

ಮುಖ್ಯ ನ್ಯಾಯಮೂರ್ತಿಗಳಿಗೆ ಕ್ಲೀನ್‌ ಚಿಟ್‌ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಕ್ಲೀನ್‌ ಚಿಟ್‌ ಇಲ್ಲ’, ‘ಕಾನೂನಿನ ಸಾರ್ವಭೌಮತ ಕಾಪಾಡಬೇಕು’, ‘ಕಾನೂನಿಗಿಂತ ನೀವು ದೊಡ್ಡವರಲ್ಲ’ ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ವರದಿ ಬಹಿರಂಗ ಪಡಿಸಲು ಸಲಹೆ:ಮುಖ್ಯ ನ್ಯಾಯಮುರ್ತಿ ರಂಜನ್‌ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಕುರಿತು ತನಿಖೆ ನಡೆಸಿದ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಮಾಜಿ ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಆರೋಪದ ಹಿಂದೆ ದೊಡ್ಡ ಪಿತೂರಿ ನಡೆದಿದೆ. ಜನರಿಗೆ ಈ ವಿಷಯ ಗೊತ್ತಾಗಬೇಕಾಗಿದ್ದು, ಅದಕ್ಕಾಗಿ ವರದಿಯನ್ನು ಬಹಿರಂಗ ಪಡಿಸಬೇಕು. ಇಂಥ ಪ್ರಕರಣಗಳಲ್ಲಿ ಯಾವುದೇ ಮಾಹಿತಿಯನ್ನು ಮುಚ್ಚಿಡಬಾರದು’ ಎಂದು ಅವರು ಹೇಳಿದ್ದಾರೆ.

‘ನ್ಯಾಯಾಲಯದ ಅಣಕ’

‘ಸಿಜೆಐ ವಿರುದ್ಧ ನಾನು ಮಾಡಿದ ಆರೋಪ ಕುರಿತಂತೆ ಆಂತರಿಕ ತನಿಖಾ ಸಮಿತಿಯ ವರದಿಯ ಪ್ರತಿಯನ್ನು ನನಗೆ ನೀಡದೇ ಇರುವುದು ನ್ಯಾಯಾಲಯವನ್ನೇ ಅಣಕಿಸಿದಂತಾಗಿದೆ’ ಎಂದು ದೂರುದಾರ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತನಿಖೆಯ ವರದಿಯನ್ನು ಬಹಿರಂಗಪಡಿಸಿಲ್ಲ. ನನಗೂ ನೀಡಿಲ್ಲ’ ಎಂದೂ ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.