ಕೋಲ್ಕತ್ತ: ಮಹಿಳೆಯರು ಮತ್ತು ಯುವತಿಯರು ನಿತ್ಯವೂ ಆತಂಕಕಾರಿ ಅನುಭವಗಳಿಗೆ ಗುರಿಯಾಗುತ್ತಿದ್ದರೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಟೀಕಿಸಿದ್ದಾರೆ.
ಅತ್ಯಾಚಾರ ನಡೆದಿದೆ ಎನ್ನಲಾದ ಒಂಬತ್ತು ವರ್ಷದ ಬಾಲಕಿಯೊಬ್ಬಳ ಶವದ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ತರಾತುರಿಯಲ್ಲಿ ನಡೆಸಿದ್ದನ್ನು ಅವರು ಖಂಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಈ ಘಟನೆ ನಿದರ್ಶನ ಎಂದಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಯೂ ಆಗಿರುವ ಅಭಿಷೇಕ್ ಅವರು ಸೋಮವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದಾಗ ಬಿಜೆಪಿ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ಎದುರಿಸಿದ್ದರು.
‘ದೆಹಲಿ ಪೊಲೀಸ್ ಆಯುಕ್ತರಾಗಿ ಹೊಸದಾಗಿ ನೇಮಕಗೊಂಡಿರುವ, ಅಮಿತ್ ಶಾ ಅವರಿಗೆ ಆಪ್ತರೂ ಆಗಿರುವ ರಾಕೇಶ್ ಅಸ್ತಾನಾ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಈಗಾಗಲೇ ವಿಫಲರಾಗುತ್ತಿದ್ದಾರೆ. ಅಥವಾ ಅವರನ್ನು ನೇಮಕ ಮಾಡಿರುವ ಉದ್ದೇಶವೇ ಬೇರೆ ಇದೆಯೇ?’ ಎಂದು ಅಭಿಷೇಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.