ಪಟ್ನಾ/ಬೆಂಗಳೂರು: ‘ಸರ್ಕಾರವು ಕಾಂಡೋಮ್ ಸಹ ನೀಡಲಿ ಎಂದು ನೀವು ಬಯಸುತ್ತೀರಿ ಅಲ್ಲವೇ’ ಎಂದು ಐಎಎಸ್ ಅಧಿಕಾರಿಯೊಬ್ಬರು ಶಾಲಾ ಬಾಲಕಿಯನ್ನು ಪ್ರಶ್ನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಬಿಹಾರದ ಪಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ, ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರು ಕೇಳಿರುವ ಪ್ರಶ್ನೆ ಇದು.
ಭಮ್ರಾ ಅವರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ್ದಾರೆ.
ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು,‘ಸರ್ಕಾರವು ಶಾಲಾ ವಿದ್ಯಾರ್ಥಿನಿಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಬಹುದೇ’ ಎಂದು ಪ್ರಶ್ನಿಸಿದ್ದಾಳೆ. ಆಗ ಭಮ್ರಾ ಅವರು, ‘ಸರ್ಕಾರವು ಜೀನ್ಸ್ ಸಹ ನೀಡಲಿ ಎಂದು ನಾಳೆ ಬಯಸುತ್ತೀರಿ. ಕೊನೆಗೆ, ಕಾಂಡೋಮ್ ಅನ್ನೂ ಸರ್ಕಾರ ನೀಡಲಿ ಎಂದು ಬಯಸುತ್ತೀರಿ. ಸರ್ಕಾರ ಕಾಂಡೋಮ್ ನೀಡಬೇಕೆ’ ಎಂದು ಕೇಳಿದ್ದಾರೆ.
ಆಗ ವಿದ್ಯಾರ್ಥಿನಿ, ‘ಸೇವೆ ಮಾಡಲಿ ಎಂದಲ್ಲವೇ ನಾವು ಮತ ನೀಡುವುದು’ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಭಮ್ರಾ ಅವರು, ‘ಇದು ಮೂರ್ಖತನದ ಪರಮಾವಧಿ. ಹಾಗಿದ್ದಲ್ಲಿ ಮತ ಹಾಕಬೇಡಿ. ಇದು ಪಾಕಿಸ್ತಾನವಾಗಲಿ’ ಎಂದಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ
ವ್ಯಕ್ತಪಡಿಸಿದ ವಿದ್ಯಾರ್ಥಿನಿ, ‘ಇದ್ಯಾಕೆ ಪಾಕಿಸ್ತಾನವಾಗಬೇಕು. ಇದು ಭಾರತ. ನಾನು ಭಾರತೀಯಳು’ ಎಂದು ತಿರುಗೇಟು ನೀಡಿದ್ದಾಳೆ.
ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಈ ವಿಡಿಯೊ ಸಾವಿರಾರು ಬಾರಿ ಹಂಚಿಕೆಯಾಗಿದೆ. ಆದರೆ, ‘ನಾನು ಆ ಹೇಳಿಕೆ ನೀಡಿಯೇ ಇಲ್ಲ’ ಎಂದು ಭಮ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.