ಪಂಪಾ: ಅಯ್ಯಪ್ಪ ದರ್ಶನಕ್ಕಾಗಿ ಬಂದ ಮನಿತಿ ಸಂಘಟನೆಯ ಮಹಿಳೆಯರು ಶಬರಿಮಲೆಗೆ ಆಗಮಿಸಿದ್ದರು.ಆದರೆ ಅಲ್ಲಿ ಮಹಿಳೆಯರ ಪ್ರವೇಶಕ್ಕೆ ಪ್ರತಿಭಟನೆ ಕಂಡುಬಂದ ಕಾರಣ ಅವರು ದೇವರ ದರ್ಶನ ಪಡೆಯದೆ ವಾಪಸ್ ಆಗಿದ್ದಾರೆ.
ಬೆಳಗ್ಗೆಯೇ ಅಯ್ಯಪ್ಪ ದರ್ಶನಕ್ಕಾಗಿ ಬಂದಿದ್ದ ಈ ಮಹಿಳೆಯರನ್ನು ಪಂಪಾದಲ್ಲಿ ಪ್ರತಿಭಟನಾಕಾರರು ತಡೆದಿದ್ದರು.ಬೆಳಗ್ಗೆ 11.30ಕ್ಕೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ಅಯ್ಯಪ್ಪ ದರ್ಶನಕ್ಕಾಗಿ ಬಂದ ಮಹಿಳೆಯರನ್ನು ಸನ್ನಿಧಾನಕ್ಕೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದರು.
ಆದರೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದ್ದರಿಂದ ಮನಿತಿ ಸಂಘಟನೆಯ ಮಹಿಳೆಯರಿಗೆ ಸನ್ನಿಧಾನದತ್ತ ಹೋಗಲು ಸಾಧ್ಯವಾಗಿಲ್ಲ.ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನೂಕು ನುಗ್ಗಲು ಉಂಟಾಗಿದ್ದು, ಮನಿತಿ ಸಂಘಟನೆಯ ಮಹಿಳೆಯರನ್ನು ಕಂಟ್ರೋಲ್ ರೂಂಗೆ ಕರೆದೊಯ್ದು ರಕ್ಷಣೆ ನೀಡಲಾಗಿತ್ತು.ಆನಂತರ ಅವರನ್ನು ನಿಲಯ್ಕಲ್‍ಗೆ ಕರೆದೊಯ್ದು, ಅಲ್ಲಿಂದ ಸುರಕ್ಷಿತವಾಗಿ ಕೇರಳದ ಗಡಿ ದಾಟಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಶಬರಿಮಲೆಗೆ ಮತ್ತೆ ಬರುತ್ತೇವೆ
ತಮಿಳುನಾಡಿನಿಂದ ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆಗೆ ಬಂದು ವಾಪಸ್ ಆಗಿರುವಮನಿತಿ ಸಂಘಟನೆಯ ಸದಸ್ಯರು, ನಾವು ಮತ್ತೆ ಶಬರಿಮಲೆಗೆ ಬರುತ್ತೇವೆ ಎಂದು ಹೇಳಿದ್ದಾರೆ.ಅಯ್ಯಪ್ಪ ದರ್ಶನ ಆಗ್ರಹಿಸಿ ಬಂದ ನಮಗೆ ರಕ್ಷಣೆ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಅವರುಹೇಳಿದ್ದಾರೆ. ಪೊಲೀಸರು ನಮ್ಮನ್ನು ಬಲವಂತವಾಗಿ ಹಿಂತಿರುಗುವಂತೆ ಮಾಡಿದರು ಎಂದು ಮನಿತಿ ಸಂಘಟನೆಯ ನೇತಾರೆ ಸೆಲ್ವಿ ಹೇಳಿದ್ದಾರೆ.
ಇದೀಗ ಈ ಸಂಘಟನೆಯ ಸದಸ್ಯರು ಮಧುರೈಗೆ ತೆರಳಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪಂಪಾ ಮತ್ತು ಶರಣಮಾರ್ಗದಲ್ಲಿಈ ಮಹಿಳೆಯರನ್ನು ತಡೆದ ಪ್ರತಿಭಟನಾಕಾರರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.