ADVERTISEMENT

ವನಿತಾ ಮದಿಲ್: ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 12:36 IST
Last Updated 1 ಜನವರಿ 2019, 12:36 IST
ಕೃಪೆ: ಮಾತೃಭೂಮಿ ಪತ್ರಿಕೆ
ಕೃಪೆ: ಮಾತೃಭೂಮಿ ಪತ್ರಿಕೆ   

ಚೆಟ್ಟುಕುಂಡ್: ಕೇರಳ ಸರ್ಕಾರ ಆಯೋಜಿಸಿದ ವನಿತಾ ಮದಿಲ್ ಕಾರ್ಯಕ್ರಮದ ವೇಳೆ ಕಾಸರಗೋಡಿನಲ್ಲಿ ಸಂಘರ್ಷವುಂಟಾಗಿದೆ.

ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ಬಳಿಯ ಚೆಟ್ಟುಕುಂಡ್‍ನಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ರಸ್ತೆ ತಡೆಯೊಡ್ಡಿದ ಕಾರಣ 300 ಮೀಟರ್ ವ್ಯಾಪ್ತಿಯಲ್ಲಿ ವನಿತಾ ಮದಿಲ್ ಸಾಧ್ಯವಾಗಲಿಲ್ಲ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ವನಿತಾ ಮದಿಲ್ ಆರಂಭವಾಗುವ ಮುನ್ನವೇ ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ಅಲ್ಲಿಗೆ ಲಗ್ಗೆಯಿಟ್ಟಿದ್ದಾರೆ.ವನಿತಾ ಮದಿಲ್‍ನಲ್ಲಿ ಭಾಗವಹಿಸಲು ಅಲ್ಲಿ ನೆರೆದಿದ್ದ ಮಹಿಳೆಯರ ಮೇಲೆ ಕಲ್ಲುತೂರಾಟ ಮಾಡಿದ ಬಿಜೆಪಿ ಕಾರ್ಯಕರ್ತರುರೈಲ್ವೆ ಹಳಿ ಬದಿಯಲ್ಲಿದ್ದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ.ಹುಲ್ಲಿಗೆ ಬೆಂಕಿ ಹಚ್ಚಿದ ಕಾರಣ ಹೊಗೆ ಎಲ್ಲೆಡೆವ್ಯಾಪಿಸಿದ್ದು, ಉಸಿರು ಕಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ.ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಆಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಪತ್ರಿಕಾ ವರದಿಯಲ್ಲಿ ಹೇಳಿದೆ.

ADVERTISEMENT

ವನಿತಾ ಮದಿಲ್ ವಿರುದ್ಧ ಪ್ರತಿಭಟಿಸಿ, ಸಂಘರ್ಷವನ್ನುಂಟು ಮಾಡಿದ ಬಿಜೆಪಿ,ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಸಿಪಿಎಂ, ಬಿಜೆಪಿ ಮತ್ತು ಹಲವಾರು ಪೊಲೀಸರಿಗೆ ಗಾಯಗಳಾಗಿವೆ.ಗಾಯಗೊಂಡವರನ್ನು ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಅಯ್ಯಪ್ಪಜ್ಯೋತಿಯಲ್ಲಿ ಭಾಗವಹಿಸಲು ಹೋಗಿದ್ದವರ ಮೇಲೆ ಕಳೆದ ದಿನ ಕಣ್ಣೂರಿನಲ್ಲಿ ದಾಳಿ ನಡೆದಿದ್ದು, ಇದಕ್ಕೆ ಪ್ರತಿಕಾರವಾಗಿ ವನಿತಾ ಮದಿಲ್‍ ವಿರುದ್ಧ ಈ ರೀತಿ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ವನಿತಾ ಮದಿಲ್‍ ಕಾರ್ಯಕ್ರಮ ಸಂಬಂಧ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ಸ್ವಲ್ಪ ಹೊತ್ತು ಭಾಗವಹಿಸಿ ಸಚಿವ ಇ.ಚಂದ್ರಶೇಖರನ್ ಸೇರಿದಂತೆ ಎಡಪಕ್ಷದ ಹಲವು ನೇತಾರರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.