ರಾಯಪುರ : ‘ಮಹಿಳಾ ಮೀಸಲು ಮಸೂದೆಯು ಬಿಜೆಪಿಯ ಪೊಳ್ಳು ಭರವಸೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಛತ್ತೀಸಗಢದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಮಹಿಳಾ ಮೀಸಲು ಮಸೂದೆಯನ್ನು 2034ರವರೆಗೂ ಜಾರಿಗೊಳಿಸಲು ಆಗುವುದಿಲ್ಲ. ಈ ಮಸೂದೆ ಆಧರಿಸಿ ಜನರು ಮತ ಹಾಕುತ್ತಾರೆ ಮತ್ತು ಕೆಲ ಸಮಯದಲ್ಲಿ ಪಕ್ಷ ನೀಡಿದ ಭರವಸೆಗಳನ್ನು ಮರೆತುಬಿಡುತ್ತಾರೆ ಎಂದು ಬಿಜೆಪಿ ಯೋಚಿಸಿದೆ’ ಎಂದರು.
’ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯು ಹೊಸತಲ್ಲ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಖಚಿತಪಡಿಸಲು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳನ್ನು ತಂದಿದ್ದರು‘ ಎಂದು ಅವರು ಸ್ಮರಿಸಿದರು.
‘ಇತರ ಹಿಂದುಳಿದ ವರ್ಗಗಳ ಗಣತಿ ಕಾರ್ಯ ಆಗಬೇಕು ಹಾಗೂ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೂ (ಒಬಿಸಿ) ಕೋಟಾ ದೊರೆಯುವಂತಾಗಬೇಕು’ ಎಂದು ಅವರು ಆಗ್ರಹಿಸಿದರು.
’ಛತ್ತೀಸಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಐದು ವರ್ಷಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಇಷ್ಟು ಕೆಲಸ ಮಾಡಲು ಬಿಜೆಪಿಗೆ 15 ವರ್ಷಗಳೇ ಬೇಕಾಗುತ್ತವೆ. ರಾಜ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.