ಲಖನೌ: ಮಹಿಳೆಯರು ಸಂಸದರಾಗಿ ಹಾಗೂ ಶಾಸಕರಾಗಿ ಆಯ್ಕೆಯಾಗಿ ಸಂಸತ್ ಹಾಗೂ ವಿಧಾನಸಭೆ ಪ್ರವೇಶಿಸುವುದನ್ನು ಯಾರಿಂದಲೂ ತಡೆಯಲಾಗವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ‘ಶಕ್ತಿ ವಂದನಾ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ನಾರಿ ಶಕ್ತಿ ವಂದನ್’ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಈ ಮಸೂದೆ ಅಡಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಅವಕಾಶವಿದೆ ಎಂದು ಶುಕ್ರವಾರ ತಿಳಿಸಿದ್ದಾರೆ .
‘ನಾರಿ ಶಕ್ತಿ ವಂದನ್’ ಮಸೂದೆ ಅನುಷ್ಠಾನದಿಂದಾಗಿ ಮಹಿಳೆಯರು ಸಂಸತ್ ಮತ್ತು ವಿಧಾನಸಭೆ ಪ್ರವೇಶಿಸುವುದನ್ನು ಯಾವುದೇ ರಾಜಕೀಯ ಪಕ್ಷದವರು ತಡೆಯಲು ಸಾಧ್ಯವಿಲ್ಲ ಎಂದು ಆದಿತ್ಯನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸುಮಾರು 500 ವರ್ಷಗಳ ಸುದೀರ್ಘ ಹೋರಾಟವಾಗಿದೆ. ಇಂದು ಇಡೀ ಜಗತ್ತು ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದತ್ತ ಆಕರ್ಷಿತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
‘ರಾಮ ರಾಜ್ಯ‘ ಪರಿಕಲ್ಪನೆಯಲ್ಲಿ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಮೋದಿ ಸರ್ಕಾರವು ರೈತರು, ಮಹಿಳೆಯರು, ಯುವಕರು ಹಾಗೂ ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಯಾವುದೇ ತಾರತಮ್ಯವಿಲ್ಲದೆ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದಾರೆ. ಹಾಗೂ ಯೋಜನೆಗಳನ್ನು ಜನರಿಗೆ ತಲುಪಿಸಲು ಅಭಿಯಾನಗಳನ್ನೂ ಆರಂಭಿಸಲಾಯಿತು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
‘ಪ್ರಧಾನ ಮಂತ್ರಿ ಜನ್ ಧನ್ ಖಾತೆ, ಬೇಟಿ ಬಚಾವೋ ಬೇಟಿ ಪಡಾವೋ, ಮಾತೃ ವಂದನಾ ಮತ್ತು ಜೀವನ ಜ್ಯೋತಿ ಭೀಮಾ ಯೋಜನೆ ಸೇರಿದಂತೆ ಈ ಎಲ್ಲಾ ಯೋಜನೆಗಳು ಮಹಿಳೆಯರಿಗೆ ಗೌರವದ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈವರೆಗೂ 17 ಲಕ್ಷ ಹೆಣ್ಣುಮಕ್ಕಳು ‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ‘ ಮೂಲಕ ಮದುವೆಯಾಗಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಸಿಂಗ್ ಚೌಧರಿ, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್, ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಧರಂಪಾಲ್ ಸಿಂಗ್ ಮತ್ತು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಶಾಕ್ಯಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.