ಶ್ರೀನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ವಿಷಯವನ್ನು ರಾಜಕೀಯಗೊಳಿಸುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ.
ರಾಮ ಮಂದಿರದ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. ಇದು ಮೊದಲ ಅಥವಾ ಕೊನೆಯ ಉದ್ಘಾಟನಾ ಕಾರ್ಯಕ್ರಮವಲ್ಲ. ಹಿಂದೆಯೂ ಉದ್ಘಾಟನೆ ಕಾರ್ಯಕ್ರಮವನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ವಿಷಯವನ್ನು ರಾಜಕೀಯಗೊಳಿಸಬೇಕೋ ಅನ್ನೋದು ನಿಮಗೆ ಬಿಟ್ಟ ವಿಚಾರ. ಈ ವಿಷಯವನ್ನು ನಾವು ರಾಜಕೀಯಗೊಳಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಆಹ್ವಾನ ಸಿಕ್ಕಿದರೆ ಕಾರ್ಯಕ್ರಮದಲ್ಲಿ ಭಾಗವಹಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಆಮಂತ್ರಿಸುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.
ಯಾರನ್ನು ಆಹ್ವಾನಿಸಬೇಕೋ ಅವರಿಗೆ ಈಗಾಗಲೇ ಆಮಂತ್ರಣ ಪತ್ರ ಕಳುಹಿಸಲಾಗಿದೆ. ಉದ್ಯಮಿಗಳು, ಕ್ರಿಕೆಟಿಗರು, ಸಿನಿಮಾ ತಾರೆಯರಿಗೆ ಆಮಂತ್ರಣ ನೀಡಲಾಗಿದೆ. ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡಿದ್ದೀರಾ ? ಇಲ್ಲ. ಅವರಿಗೆ ನನ್ನನ್ನು ಆಮಂತ್ರಿಸುವ ಇರಾದೆಯೇ ಇಲ್ಲ. ಹಾಗಾಗಿ ಆಮಂತ್ರಿಸಿದರೆ ಏನು ಮಾಡಬೇಕು ಎಂಬುದರ ಕುರಿತು ಏಕೆ ಚಿಂತಿಸಬೇಕು ಎಂದು ಹೇಳಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.