ADVERTISEMENT

ಹಿಂಡೆನ್‌ಬರ್ಗ್‌ ವರದಿ ಆಧಾರದ ಸುದ್ದಿಗಳಿಗೆ ತಡೆಯಾಜ್ಞೆ ಕೋರಿದ್ದ ಮನವಿ ತಿರಸ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2023, 8:43 IST
Last Updated 24 ಫೆಬ್ರುವರಿ 2023, 8:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಅದಾನಿ ಸಮೂಹ’ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ರಿಸರ್ಚ್‌ ವರದಿಯನ್ನು ಆಧರಿಸಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಹಿಂಡೆನ್‌ಬರ್ಗ್ ವರದಿಯ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿರುವ ವಕೀಲ ಎಂಎಲ್ ಶರ್ಮಾ ಅವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರ ಜತೆಗೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಬೇಕೆಂಬ ವಿಷಯವನ್ನು ಅವರು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾ. ಪಿ. ಎಸ್. ನರಸಿಂಹ ಮತ್ತು ಜೆ. ಬಿ. ಪರ್ದಿವಾಲಾ ಅವರ ಪೀಠದ ಮುಂದೆ ಪ್ರಸ್ತಾಪಿಸಿದರು.

‘ನಾವು ಎಂದಿಗೂ ಮಾಧ್ಯಮಗಳಿಗೆ ಯಾವುದೇ ತಡೆಯಾಜ್ಞೆ ನೀಡುವುದಿಲ್ಲ. ಈ ವಿಷಯದಲ್ಲಿ ಶೀಘ್ರದಲ್ಲೇ ಆದೇಶ ಪ್ರಕಟಿಸುತ್ತೇವೆ’ ಎಂದು ಪೀಠವು ತಿಳಿಸಿತು.

ಮಾಧ್ಯಮಗಳು ಸಂಚಲನ ಮೂಡಿಸುತ್ತಿವೆ ಎಂದು ಶರ್ಮಾ ಪುನರುಚ್ಚರಿಸುತ್ತಿದ್ದಂತೆ, ‘ಸಮಂಜಸವಾದ ವಾದವನ್ನು ಮಾಡಿ’ ಎಂದು ಪೀಠ ಎಚ್ಚರಿಸಿತು.

ಮಾಧ್ಯಮಗಳು ಸುದ್ದಿ ವರದಿಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದರೆ, ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಹೂಡಿಕೆದಾರರಲ್ಲಿ ಭಯ ಮೂಡುತ್ತದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಹಿಂಡೆನ್‌ಬರ್ಗ್ ವರದಿಯನ್ನು ಪರಿಶೀಲಿಸಲು ರಚಿಸಲಾಗುವ ಸಮಿತಿಯಲ್ಲಿ ಸೇರಿಸಲು ಕೇಂದ್ರವು ಸೂಚಿಸಿದ ತಜ್ಞರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದರೆ ಅದನ್ನು ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಫೆಬ್ರುವರಿ 17 ರಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.