ನವದೆಹಲಿ: ಅಸ್ಸಾಂ ರಾಜ್ಯವನ್ನು ಇನ್ನೊಂದು ಕಾಶ್ಮೀರವಾಗಲು ಬಿಡುವುದಿಲ್ಲ. ಅದಕ್ಕಾಗಿಯೇ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್‌ಸಿ) ಜಾರಿಗೆ ತಂದಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನುಸುಳುಕೋರರನ್ನು ಪತ್ತೆ ಹಚ್ಚುವುದಕ್ಕಾಗಿರಾಷ್ಟ್ರೀಯ ಪೌರ ನೋಂದಣಿ ಜಾರಿಗೆ ತಂದಿರುವುದಾಗಿ ಹೇಳಿದ ಶಾ, ಅಸ್ಸಾಂನಲ್ಲಿ ನುಸುಳಿರುವವರನ್ನು ಬಿಜೆಪಿ ಗಡಿಪಾರು ಮಾಡುತ್ತದೆ ಎಂದು ಗುಡುಗಿದ್ದಾರೆ.
ಅಸ್ಸಾಂನ್ನು ಇನ್ನೊಂದು ಕಾಶ್ಮೀರವಾಗಲು ಬಿಡುವುದಿಲ್ಲ. ಇದು ನಮ್ಮ ಬದ್ದತೆ.ಅದೆಷ್ಟು ಸಲ ಬೇಕಾದರೂ ನಾವು ರಾಷ್ಟ್ರೀಯ ಪೌರ ನೋಂದಣಿ ಪ್ರಕ್ರಿಯೆಯನ್ನುಮಾಡುತ್ತೇವೆ.ಈ ಮೂಲಕ ನುಸುಳುಕೋರರನ್ನು ಪತ್ತೆ ಹಚ್ಚಿ ಅವರನ್ನು ಅಸ್ಸಾಂನಿಂದ ಗಡಿಪಾರು ಮಾಡುತ್ತೇವೆ ಎಂದು ಅಸ್ಸಾಂನ ಉತ್ತರ ಲಖಿಂಪುರ್ ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಶಾ ಹೇಳಿದ್ದಾರೆ.
ಈಶಾನ್ಯ ರಾಜ್ಯ ಮತ್ತು ಅಸ್ಸಾಂಗೆ ಮಾತ್ರ ಇದು ಸೀಮಿತ ಎಂಬ ತಪ್ಪು ಮಾಹಿತಿಗಳು ಹಬ್ಬಿರುವ ಕಾರಣ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಿಲ್ಲ.
ಇದು ಈಶಾನ್ಯ ರಾಜ್ಯಗಳಿಗೆ ಮಾತ್ರವಲ್ಲ, ದೇಶದಾದ್ಯಂತವಿರುವ ಎಲ್ಲ ನಿರಾಶ್ರಿತರಿಗಾಗಿರುವುದಾಗಿದೆ.ಪೌರತ್ವ ಮಸೂದೆಯಿಲ್ಲದೆ ಅಸ್ಸಾಂನ ಭೌಗೋಳಿಕ ಚಿತ್ರಣವೇ ಬದಲಾಗುತ್ತಿದೆ. ಈ ರಾಜ್ಯದ ಜನರು ಅಪಾಯಕ್ಕೊಳಗಾಗುತ್ತಾರೆ ಎಂದಿದ್ದಾರೆ ಶಾ.
ತಮ್ಮ ಭಾಷಣದಲ್ಲಿ ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ ಅವರು ಈ ಹೇಯ ಕೃತ್ಯವನ್ನು ಪಾಕಿಸ್ತಾನದ ಉಗ್ರರು ಮಾಡಿದ್ದಾರೆ.ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಯಾಕೆಂದರೆ ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ,ಇದು ಬಿಜೆಪಿ ಸರ್ಕಾರ.ನರೇಂದ್ರ ಮೋದಿ ಸರ್ಕಾರ ದೇಶದ ಭದ್ರತೆಯೊಂದಿಗೆ ಯಾವುದೇ ರಾಜಿ ಮಾಡುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.