ನವೆಂಬರ್ 20 ಮಕ್ಕಳ ಪಾಲಿಗೆ ಮಹತ್ತರ ದಿನ. 1959ರಲ್ಲಿ ವಿಶ್ವಸಂಸ್ಥೆಯಲ್ಲಿ ಇದೇ ದಿನ ಮಕ್ಕಳ ಹಕ್ಕುಗಳನ್ನು ಘೊಷಿಸಲಾಯಿತು. 1989ರಲ್ಲೂ ಇದೇ ದಿನ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತವೂ ಸೇರಿ ಸುಮಾರು 190 ರಾಷ್ಟ್ರಗಳು ಸಹಿ ಹಾಕಿದವು. ಈ ಎರಡು ಮಹತ್ತರ ಘಟನೆಗಳ ನೆನಪಿಗಾಗಿ 1990ರಿಂದ ವಿಶ್ವದಾದ್ಯಂತ ನವೆಂಬರ್ 20ರಂದು ಮಕ್ಕಳ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು.
ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಪೌಷ್ಟಿಕ ಆಹಾರವಿಲ್ಲದೆ ನಾನಾ ರೋಗಗಳಿಗೆ ತುತ್ತಾಗುತ್ತಿರುವವರು, ಶಿಕ್ಷಣವಂಚಿತರು, ಬಲವಂತದ ದುಡಿಮೆಯಲ್ಲಿ ನಲಗುತ್ತಿರುವ ಮಕ್ಕಳು ಹಲವರು ಇದ್ದಾರೆ. ನಮ್ಮ ದೇಶದಲ್ಲೂ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿ ನವೆಂಬರ್ 20ರಂದು ಮಕ್ಕಳ ಹಕ್ಕುಗಳ ದಿನ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತು. ಇದಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನೂ (ನ್ಯಾಷನಲ್ ಕಮಿಷನ್ ಫಾರ್ ಚೈಲ್ಡ್ ರೈಟ್ಸ್ ಪ್ರೊಟೆಕ್ಷನ್) ಸ್ಥಾಪಿಸಿತು.
ಈ ಆಯೋಗದ ಅಧಿಕಾರಿಗಳು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾರೆ. ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ಸಾಮಾನ್ಯರಿಗೆ ತಿಳಿಸುವುದೇ ಈ ದಿನದ ಮುಖ್ಯ ಉದ್ದೇಶ.
ಮಕ್ಕಳಿಗೆ ಕಲ್ಪಿಸಿರುವ ಹಕ್ಕುಗಳನ್ನು ಉಲ್ಲಂಘಿಸಿದವರ ವಿರುದ್ಧ ದಂಡ ಮತ್ತು ಜೈಲುಶಿಕ್ಷೆ
ವಿಧಿಸುವ ಅಧಿಕಾರವೂ ಇದೆ.
ಮಕ್ಕಳಿಗಾಗಿ ಭಾರತದ ಸಂವಿಧಾನ ಕಲ್ಲಿಸಿರುವ ಹಕ್ಕುಗಳು
ಆರ್ಟಿಕಲ್ 21 (ಎ): 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಬೇಕು.
ಆರ್ಟಿಕಲ್ 23: ಅಕ್ರಮವಾಗಿ ಸಾಗಾಣೆ ಮಾಡುವವರಿಂದ ರಕ್ಷಣೆ ಪಡೆಯುವ ಹಕ್ಕು.
ಆರ್ಟಿಕಲ್ 24: ಯಾವುದೇ ಅಪಾಯಕಾರಿ ಉದ್ದಿಮೆ ಅಥವಾ ಕಾರ್ಖಾನೆಗಳಲ್ಲಿ 14 ವರ್ಷದೊಳಗಿನ ಮಕ್ಕಳು ಬಲವಂತದ ದುಡಿಮೆಯಿಂದ ರಕ್ಷಿಸಿಕೊಳ್ಳುವ ಹಕ್ಕು.
ಆರ್ಟಿಕಲ್ 39 (ಇ): ಆರ್ಥಿಕವಾಗಿ ಲಾಭಗಳಿಸುವ ಉದ್ದೇಶದಿಂದ ಮಕ್ಕಳನ್ನು ವಯಸ್ಸು ಮತ್ತು ಶಕ್ತಿಗೆ ಮೀರಿದ ಬಲವಂತದ ದುಡಿಮೆಗೆ ದೂಡುವ ಉದ್ದಿಮೆದಾರರಿಂದ ರಕ್ಷಿಸಿಕೊಳ್ಳುವ ಹಕ್ಕು.
ಆರ್ಟಿಕಲ್ 39 (ಎಫ್): ದರೋಡೆ ಮತ್ತು ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳುವ ಮತ್ತು ಅಭಿವೃದ್ಧಿಗೆ ನೆರವಾಗುವ ಎಲ್ಲ ಬಗೆಯ ಅವಕಾಶಗಳನ್ನು ಪಡೆಯುವ ಹಕ್ಕು.
ಆರ್ಟಿಕಲ್ 45: ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಲ್ಪಿಸುವ ಹಾಗೂ ಸುರಕ್ಷತೆ ಒದಗಿಸುವ ಹಕ್ಕು.
ಮಕ್ಕಳನ್ನು ರಕ್ಷಿಸುವ ಕಾನೂನುಗಳು
ಬಾಲ್ಯವಿವಾಹ ನಿಷೇಧ ಕಾಯ್ದೆ: 2006ರಲ್ಲಿ ರೂಪುಗೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ, 2007ರ ನವೆಂಬರ್ 1ರಿಂದ ಜಾರಿಗೆ ಬಂತು. ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ 21ವರ್ಷ ಮೇಲ್ಪಟ್ಟ ಪುರುಷರು ಮತ್ತು 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ವಿವಾಹ ಮಾಡಿಕೊಳ್ಳಬಹುದು ಎಂದು ಘೋಷಿಸಿತು.
ಬಾಲಕಾರ್ಮಿಕ ಪದ್ಧತಿ ನಿಷೇಧ ಕಾನೂನು: 1986ರ ಬಾಲಕಾರ್ಮಿಕ ಕಾನೂನು ಮಕ್ಕಳನ್ನು ಆರ್ಥಿಕ ಉದ್ದೇಶಗಳಿಗಾಗಿ ದುಡಿಸಿಕೊಳ್ಳದಿರುವುದು, ಅಪಾಯಕಾರಿ ಕೆಲಸಗಳಿಂದ ದೂರವಿರಿಸಲು ನೆರವಾಗುತ್ತದೆ.
ಶಿಕ್ಷಣ: 2002ರಲ್ಲಿ ಸಂವಿಧಾನದ 68ನೇ ತಿದ್ದುಪಡಿ ಮಾಡಿ ಎಲ್ಲ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಸೇರಿಸಲಾಯಿತು. ಈ ಮೂಲಕ ಸರ್ಕಾರಿ ಶಾಲೆಗಳಷ್ಟೇ ಅಲ್ಲದೇ, ಖಾಸಗಿ ಶಾಲೆಗಳಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶೇ 25ರಷ್ಟು ಸೀಟುಗಳನ್ನು ಮೀಸಲಿರಸಬೇಕು ಎಂದು ಕಾನೂನು ರೂಪಿಸಲಾಗಿದೆ.
ಲೈಂಗಿಕ ಕಿರುಕುಳದಿಂದ ರಕ್ಷಣೆ: 2012ರಲ್ಲಿ ರೂಪಿಸಲಾದ ಈ ಕಾನೂನಿನ ಅನ್ವಯ ಮಕ್ಕಳಿಗೆ ಲೈಂಗಿಕ ಹಿಂಸೆ ನೀಡುವುದು, ಮಕ್ಕಳ ಮುಂದೆ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುವುದು, ಅಶ್ಲೀಲ ಚಿತ್ರಗಳಲ್ಲಿ ಮಕ್ಕಳ ನಟನೆಯನ್ನು ಈ ಕಾನೂನು ನಿಷೇಧಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.