ಬೆಂಗಳೂರು: 'ಪ್ರಸ್ತುತ ಭಾರತೀಯರು ಅಭಿವೃದ್ಧಿ ಪಡಿಸಿರುವ ಎರಡು ಕೋವಿಡ್ ಲಸಿಕೆಗಳಿವೆ. ಮುಂಬರುವ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಲಸಿಕೆಗಳು ಬರಲಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಭಾರತದ ಸಾಧನೆಗಳನ್ನು ತೆರೆದಿಟ್ಟರು.
'ಆತಂಕಗಳ ನಡುವೆ, ನಾನು ನಿಮ್ಮ ಎದುರು ನಂಬಿಕೆ ಹಾಗೂ ಭರವಸೆಯ ಸಂದೇಶದೊಂದಿಗೆ 130 ಕೋಟಿ ಭಾರತೀಯರ ಪರವಾಗಿ ಬಂದಿದ್ದೇನೆ' ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ದತ್ತಾಂಶ ಸುರಕ್ಷತೆಗಾಗಿ ಕಠಿಣ ಕಾನೂನು ರೂಪಿಸುವ ಕಾರ್ಯ ಪ್ರಯತ್ನದಲ್ಲಿದೆ ಎಂದು ಖಾಸಗಿ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದಂತೆ ದೇಶ ಕೈಗೊಂಡಿರುವ ಕ್ರಮವನ್ನು ತಿಳಿಸಿದರು.
'ಬಹಳಷ್ಟು ಜನರ ಜೀವ ಉಳಿಸಲು ಭಾರತವು ಯಶಸ್ವಿಯಾಗಿದೆ, ಇಡೀ ಮಾನವ ಕುಲವನ್ನು ಬಹುದೊಡ್ಡ ದುರಂತದಿಂದ ರಕ್ಷಿಸಿದ್ದೇವೆ. ದೇಶವು ಅತಿ ದೊಡ್ಡ ಲಸಿಕೆ ಅಭಿಯಾನವನ್ನು ಆರಂಭಿಸಿದೆ ಹಾಗೂ ಕಳೆದ 12 ದಿನಗಳಲ್ಲಿ 23 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಜಾಗತಿಕ ಸಮುದಾಯಕ್ಕೆ ಲಸಿಕೆಗಳನ್ನು ಪೂರೈಸುವ ಮೂಲಕ ಮತ್ತು ಜನರಿಗೆ ತರಬೇತಿ ನೀಡುವ ಮೂಲಕ ಹೊಣೆಗಾರಿಕೆಯನ್ನು ಪೂರೈಸಿದ್ದೇವೆ' ಎಂದರು.
'ಕನೆಕ್ಟಿವಿಟಿ, ಆಟೊಮೇಷನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ರಿಯಲ್ ಟೈಮ್ ಡೇಟಾ; ತಂತ್ರಜ್ಞಾನ ಆಧಾರಿತ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವು ದಾಪುಗಾಲಿಟ್ಟಿದೆ' ಎಂದು ಮೋದಿ ವಿವರಿಸಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದರು.
ಜಗತ್ತಿನ 400ಕ್ಕೂ ಹೆಚ್ಚು ಕೈಗಾರಿಕಾ ಮುಖಂಡರು, ರಾಷ್ಟ್ರಾಧ್ಯಕ್ಷರು ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾದರು. ಕಂಪನಿಗಳ ಸಿಇಒಗಳೊಂದಿಗೂ ಪ್ರಧಾನಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.