ಮುಂಬೈ: ಸಾಮಾನ್ಯವಾಗಿ ಹೆದ್ದಾರಿ ಬದಿ ತಡೆಗೋಡೆಗಳಿಗೆ ಬಲಿಷ್ಠವಾದ ಸ್ಟೀಲ್, ಅಲ್ಯುಮಿನಿಯಂ, ಸಿಮೆಂಟ್ ಬಳಸುವುದುಂಟು. ಆದರೆ, ಜಗತ್ತಿನಲ್ಲಿಯೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಬಿದಿರಿನಿಂದ (ಬಂಬೂ) ಹೆದ್ದಾರಿ ತಡೆಗೋಡೆ ನಿರ್ಮಿಸಲಾಗಿದೆ.
ಮಹಾರಾಷ್ಟ್ರದ ಚಂದ್ರಾಪುರ ಹಾಗೂ ಯಾವತ್ಮಲ್ ಜಿಲ್ಲೆಗಳನ್ನು ಕೂಡಿಸುವ ವಾನಿ–ವರೋರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದಿರಿನಿಂದ ನಿರ್ಮಿಸಲಾದ 200 ಮೀಟರ್ ವರೆಗಿನ ಅಪಘಾತ ತಡೆಗೋಡೆಯನ್ನು (ಬ್ಯಾರಿಯರ್) ನಿರ್ಮಿಸಲಾಗಿದೆ.
ಆತ್ಮ ನಿರ್ಭರ ಭಾರತ್ ಪರಿಕಲ್ಪನೆಯಡಿ ಈ ಬಿದಿರಿನ ತಡೆಗೋಡೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ನಿರ್ಮಿಸಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ‘ಇದೊಂದು ಗುರುತರ ಸಾಧನೆ. ನಮ್ಮ ಆತ್ಮನಿರ್ಭರ ಭಾರತ್ ಪರಿಕಲ್ಪನೆಗೆ ಇದು ಸ್ಪಷ್ಟ ಉದಾಹರಣೆ. ಅತ್ಯಂತ ಬಲಿಷ್ಠವಾದ ಈ ಬಿದಿರಿನ ಅಪಘಾತ ತಡೆಗೋಡೆ ಒಂದು ರೀತಿ ಬಾಹುಬಲಿ’ ಎಂದು ಬಣ್ಣಿಸಿದ್ದಾರೆ.
ಈ ಬಿದಿರಿನ ತಡೆಗೋಡೆಯು ಕಬ್ಬಿಣ ಅಥವಾ ಇನ್ನಾವುದೇ ವಸ್ತುವಿನ ಪುನರ್ ಬಳಕೆಗಿಂತ ಎರಡು ಪಟ್ಟು ಪುನರ್ ಬಳಕೆ ಶಕ್ತಿಯನ್ನು ಹೊಂದಿದೆ. ಇದೊಂದು ಪರಿಸರ ಸ್ನೇಹಿ ನಡೆಯಾಗಿದ್ದು, ಸ್ಟೀಲ್ ತಡೆಗೋಡೆಗೆ ಇದು ಸಂಪೂರ್ಣ ಪರ್ಯಾಯವಾಗಬಲ್ಲದು ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.