ಅಮ್ರೇಲಿ: ಜಗತ್ತು ಭಾರತದತ್ತ ಹೊಸ ಭರವಸೆಯೊಂದಿಗೆ ನೋಡುತ್ತಿದೆ. ವಿವಿಧ ಕ್ಷೇತ್ರದಲ್ಲಿ ದೇಶ ಸಾಧಿಸುತ್ತಿರುವ ಸಾಧನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ₹4,800 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಭಾರತದೊಂದಿಗೆ ಕೈಜೋಡಿಸಲು ಬ್ರಿಕ್ಸ್ ದೇಶಗಳು ಉತ್ಸುಕತೆ ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾದ ವೇಳೆ ಅನೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ಹೊಂದಿವೆ ಎಂದ ಮೋದಿ, ನಾವು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಜಾಗತಿಕವಾಗಿ ಭಾರತದ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭೇಟಿ ನೀಡಿದ್ದರು. ಹೊಸ ತಂತ್ರಜ್ಞಾನ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಯಿತು. ಈ ವೇಳೆ ಪ್ರತಿ ವರ್ಷ 90,000 ಭಾರತೀಯರಿಗೆ ವೀಸಾಗಳನ್ನು ನೀಡುವುದಾಗಿ ಘೋಷಿಸಿದ್ದರು. ಭವಿಷ್ಯದ ದೃಷ್ಟಿಯಿಂದ ಯುವಜನತೆಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದೂ ಮೋದಿ ಹೇಳಿದ್ದಾರೆ.
ಜಗತ್ತು ಈಗ ಭಾರತದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ. ಭಾರತ ತೆಗೆದುಕೊಳ್ಳುವ ನಿಲುವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.