ADVERTISEMENT

ಮಾಧ್ಯಮ ಸ್ವಾತಂತ್ರ್ಯ: ಭಾರತಕ್ಕೆ ಕೊಟ್ಟ ರ‍್ಯಾಂಕ್ ಒಪ್ಪಲ್ಲ, ಅನುರಾಗ್‌ ಠಾಕೂರ್‌

ಪಿಟಿಐ
Published 22 ಡಿಸೆಂಬರ್ 2021, 4:14 IST
Last Updated 22 ಡಿಸೆಂಬರ್ 2021, 4:14 IST
ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌
ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌   

ನವದೆಹಲಿ: ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕಿರುವ ರ‍್ಯಾಂಕ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯ ವಿಚಾರದಲ್ಲಿ ವಿಶ್ವದ 180 ರಾಷ್ಟ್ರಗಳ ಪೈಕಿ ಭಾರತಕ್ಕೆ 142ನೇ ಸ್ಥಾನ ಸಿಕ್ಕಿರುವ ಬಗೆಗಿನ ಪ್ರಶ್ನೆಗೆ ಲೋಕಸಭೆಯಲ್ಲಿ ಮಂಗಳವಾರ ಅನುರಾಗ್‌ ಠಾಕೂರ್‌ ಲಿಖಿತ ಉತ್ತರ ನೀಡಿದ್ದಾರೆ.

ಸೂಚ್ಯಂಕದ ಕಾರ್ಯ ವಿಧಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಚಿವರು, ಇದೊಂದು 'ಪ್ರಶ್ನಾರ್ಹ ಮತ್ತು ಪಾರದರ್ಶಕವಲ್ಲದ ವರದಿ' ಎಂದಿದ್ದಾರೆ.

ADVERTISEMENT

ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು 'ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌' ಎಂಬ ವಿದೇಶಿ ಸರ್ಕಾರೇತರ ಸಂಸ್ಥೆ ಪ್ರಕಟಿಸಿದೆ. ಭಾರತಕ್ಕೆ ನೀಡಲಾಗಿರುವ ರ‍್ಯಾಂಕ್ ಮತ್ತು ಅದರ ಕಾರ್ಯ ವಿಧಾನವನ್ನು ಹಲವಾರು ಕಾರಣಗಳಿಗೆ ಕೇಂದ್ರ ಸರ್ಕಾರ ಒಪ್ಪುವುದಿಲ್ಲ. ಸೂಚ್ಯಂಕದಲ್ಲಿ ಕಡಿಮೆ ಪ್ರಮಾಣದ ಮಾದರಿ ಸಂಗ್ರಹ, ಪ್ರಜಾಪ್ರಭುತ್ವದ ಮೂಲಾಧಾರಗಳಿಗೆ ತೂಕವನ್ನು ನೀಡದಿರುವುದು, ವರದಿ ತಯಾರಿಕೆಗೆ ಅನುಸರಿಸಲಾದ ಕಾರ್ಯ ವಿಧಾನಗಳು ಪ್ರಶ್ನಾರ್ಹವಾಗಿವೆ ಮತ್ತು ಪಾರದರ್ಶಕವಾಗಿ ಕಂಡುಬಂದಿಲ್ಲ. ಮಾಧ್ಯಮ ಸ್ವಾತಂತ್ರ್ಯ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟತೆ ವರದಿಯಲ್ಲಿ ಇಲ್ಲ' ಎಂದು ಅನುರಾಗ್‌ ಠಾಕೂರ್‌ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದ ಸಂವಿಧಾನದ ಆರ್ಟಿಕಲ್‌ 19ರ ಅಡಿ ಮಾತನಾಡುವ ಮತ್ತು ಪ್ರತಿಕ್ರಿಯಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಠಾಕೂರ್‌ ಒತ್ತಿಹೇಳಿದ್ದಾರೆ.

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌
ಪ್ರತಿ ವರ್ಷ ವಿವಿಧ ದೇಶಗಳಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಅಧ್ಯಯನ ನಡೆಸುವ 'ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌' ಸಂಸ್ಥೆಯು ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ. 2019 ಮತ್ತು 2020ರಲ್ಲಿ ಭಾರತವು 140ನೇ ಸ್ಥಾನ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.