ADVERTISEMENT

ಸರ್ದಾರ್ ಪಟೇಲ್‌ ‘ಏಕತಾ ಪ್ರತಿಮೆ’ ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ

ನರ್ಮದಾ ತಟದಲ್ಲಿ ನಿರ್ಮಿಸಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ

ಪಿಟಿಐ
Published 31 ಅಕ್ಟೋಬರ್ 2018, 8:01 IST
Last Updated 31 ಅಕ್ಟೋಬರ್ 2018, 8:01 IST
   

ಅಹಮದಾಬಾದ್‌ : ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ ‘ಏಕತಾ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿಬುಧವಾರ (ಅ.31) ಲೋಕಾರ್ಪಣೆ ಮಾಡಿದರು.

ಅಕ್ಟೋಬರ್‌ 31ರಂದು ಪಟೇಲ್ ಅವರ 142ನೇ ಜನ್ಮದಿನಾಚರಣೆಯೂ ಹೌದು. ನರ್ಮದಾ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸುವರು. ನಂತರ ವಾಯುಸೇನೆಯ ಮೂರು ವಿಮಾನಗಳು ಹಾರಾಟ ನಡೆಸಿ, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ತ್ರಿವರ್ಣ ಧ್ವಜದ ಮಾದರಿ ರಚಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಮೆಯ ಹತ್ತಿರವೇ ನಿರ್ಮಿಸಿರುವ ಭಾರತದ ಏಕತೆಯನ್ನು ಸಾರುವ ಸ್ಮಾರಕ ‘ಏಕತಾ ಗೋಡೆ’ಯ ಉದ್ಘಾಟನೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಮೂರು ಜಾಗ್ವಾರ್ ಯುದ್ಧ ವಿಮಾನಗಳು ಗೋಡೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿವೆ.

ADVERTISEMENT

ಪಟೇಲ್‌ ಪ್ರತಿಮೆಗೆ ಪ್ರಧಾನಿ ಮೋದಿಯವರಿಂದ ಪುಷ್ಪ ನಮನ ನಡೆಯಲಿದೆ. ನಂತರ ಎಂಐ–17 ಹೆಲಿಕಾಪ್ಟರ್‌ಗಳಿಂದ ಪ್ರತಿಮೆಗೆ ಪುಷ್ಪಗಳ ಸುರಿಮಳೆ ಆಗಲಿದೆ. ಈ ಸಂದರ್ಭದಲ್ಲಿ 29 ರಾಜ್ಯಗಳ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬಹಿಷ್ಕಾರ: ನರ್ಮದಾ ಜಿಲ್ಲೆಯ ಕೆಲವು ಬುಡಕಟ್ಟು ಜನಾಂಗದ ಗುಂಪುಗಳು ಪ್ರತಿಮೆಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈ ಪ್ರತಿಮೆ ನಿರ್ಮಾಣದಿಂದನೈಸರ್ಗಿಕ ಸಂಪನ್ಮೂಲಗಳ ‘ಸಾಮೂಹಿಕ ವಿನಾಶ’ ಎಂದು ಆರೋಪಿಸಿ ಸ್ಥಳೀಯ ಬುಡಕಟ್ಟು ಜನಾಂಗದ ನಾಯಕರು ಬುಧವಾರ ನಡೆಯುವ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.

ನರ್ಮದಾ ನದಿಯ ಸರ್ದಾರ್‌ ಸರೋವರ ಅಣೆಕಟ್ಟಿನ ಸಮೀಪದ 22 ಗ್ರಾಮಗಳ ಸರಪಂಚರು ಪ್ರಧಾನಿ ಮೋದಿ ಅವರಿಗೆ ‘ಅ. 31 ರಂದು ನಾವು ನಿಮ್ಮನ್ನು ಸ್ವಾಗತಿಸುವುದಿಲ್ಲ’ ಎಂದುಪತ್ರ ಬರೆದಿದ್ದಾರೆ.

ಈ ಪ್ರದೇಶದಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.