ADVERTISEMENT

ಸೋನಿಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದನ್ನು ಸಮರ್ಥಿಸಿಕೊಂಡ ಧನಕರ್

‘ಸರ್ಕಾರವು ನ್ಯಾಯಾಂಗವನ್ನು ಅಮಾನ್ಯಗೊಳಿಸಲು ಪ್ರಯತ್ನಿಸುತ್ತದೆ’ ಎಂದು ಸೋನಿಯಾ ಹೇಳಿದ್ದರು

ಪಿಟಿಐ
Published 23 ಡಿಸೆಂಬರ್ 2022, 13:27 IST
Last Updated 23 ಡಿಸೆಂಬರ್ 2022, 13:27 IST
ಸಭಾಪತಿ ಜಗದೀಪ ಧನಕರ್
ಸಭಾಪತಿ ಜಗದೀಪ ಧನಕರ್   

ನವದೆಹಲಿ: ‘ಸರ್ಕಾರವು ನ್ಯಾಯಾಂಗವನ್ನು ಅಮಾನ್ಯಗೊಳಿಸುತ್ತಿದೆ’ ಎಂಬ ಕಾಂಗ್ರೆಸ್‌ ಸಂಸದೆ ಸೋನಿಯಾ ಗಾಂಧಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದನ್ನು ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಶುಕ್ರವಾರ ಸಮರ್ಥಿಸಿಕೊಂಡರು.

‘ಸೋನಿಯಾ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸದಿದ್ದಲ್ಲಿ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ನಾನು ವಿಫಲನಾದಂತಾಗುತ್ತಿತ್ತು’ ಎಂದೂ ಹೇಳಿದರು.

‘ನ್ಯಾಯಾಂಗವನ್ನು ಅಮಾನ್ಯಗೊಳಿಸುವ ಸಲುವಾಗಿಯೇ ಆಡಳಿತಾರೂಢ ಪಕ್ಷವೊಂದು ರಾಜ್ಯಸಭಾ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿಯನ್ನು ನೇಮಕ ಮಾಡಬಹುದು ಎಂಬರ್ಧದ ತೀಕ್ಷ್ಣವಾದ ಟೀಕೆಗಳನ್ನು ಮಾಡಲಾಗಿತ್ತು’ ಎಂದು ಧನಕರ್‌ ಹೇಳಿದರು.

ADVERTISEMENT

ಸೋನಿಯಾ ಗಾಂಧಿ ಅವರ ವಿರುದ್ಧ ತಾವು ನೀಡಿರುವ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕು ಎಂಬ ಕಾಂಗ್ರೆಸ್‌ ಸದಸ್ಯರ ಒತ್ತಾಯಕ್ಕೆ ಧನಕರ್‌ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಮೋದ ತಿವಾರಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಇದೇ ವಿಷಯ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಲೋಕಸಭಾ ಸದಸ್ಯರೊಬ್ಬರು ಸದನದ ಹೊರಗಡೆ ನೀಡಿದ ಹೇಳಿಕೆ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚಿಸಬಾರದು’ ಎಂದರು.

‘ಸದನd ಹೊರಗಡೆ ನೀಡಿದ್ದ ಹೇಳಿಕೆಗಳ ಬಗ್ಗೆ ಸಭಾಪತಿಗಳು ಪ್ರತಿಕ್ರಿಯಿಸಿದರೆ ಅದು ದುರದೃಷ್ಟಕರ. ಈ ಹಿಂದೆ ಯಾವತ್ತೂ ಈ ರೀತಿ ನಡೆದಿರಲಿಲ್ಲ. ಹೀಗಾಗಿ, ಪೀಠವು ನೀಡಿರುವ ಹೇಳಿಕೆಗಳನ್ನು ಹಿಂಪಡೆಯಬೇಕು ಹಾಗೂ ಅವುಗಳನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಖರ್ಗೆ ಒತ್ತಾಯಿಸಿದರು.

‘ಒಂದು ವೇಳೆ, ಸಭಾಪತಿಗಳ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕದಿದ್ದಲ್ಲಿ ಅದು ಕೆಟ್ಟ ಪೂರ್ವನಿದರ್ಶನ ತೋರಿದಂತಾಗುತ್ತದೆ’ ಎಂದೂ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಸಭಾನಾಯಕ ಹಾಗೂ ಕೇಂದ್ರ ಸಚಿವ ಪೀಯೂಷ್‌ ಗೋಯೆಲ್, ‘ಇಂಥ ನಿಂದನೀಯ ಮಾತುಗಳು ಸದನಕ್ಕೆ, ಸಂಸತ್‌ನ ಎರಡೂ ಸದನಗಳು ಆಯ್ಕೆ ಮಾಡಿರುವ ಸಭಾಪತಿಯೂ ಆಗಿರುವ ಭಾರತದ ಉಪರಾಷ್ಟ್ರಪತಿ ಅವರನ್ನು ಅವಮಾನಿಸುವಂತಿವೆ ಎಂಬುದನ್ನು ಖರ್ಗೆ ಅವರು ಅರಿತುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.