ADVERTISEMENT

ರಾವಣನನ್ನು ಕೊಂದಿದ್ದೇ ನಾನು ಎನ್ನುತ್ತಿದ್ದರೇನೋ ಮೋದಿ: ಅಜಿತ್‌ ಸಿಂಗ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 6:07 IST
Last Updated 4 ಏಪ್ರಿಲ್ 2019, 6:07 IST
   

ಬಾಗ್‌ಪತ್‌:"ಮೋದಿ ಏನಾದರೂ ಶ್ರೀಲಂಕಕ್ಕೆ ಹೋದರೆ ರಾವಣನನ್ನು ಕೊಂದಿದ್ದೇ ನಾನು ಎಂದು ಹೇಳಿದರೂ ಹೇಳಿಬಿಡುತ್ತಿದ್ದರು. ಯಾರೂ ಮಾಡದ ಕೆಲಸವನ್ನು ನಾನೇ ಮಾಡಿದೆ ಎಂದುಬಿಡುತ್ತಿದ್ದರು," ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಚೌದರಿ ಅಜಿತ್‌ ಸಿಂಗ್‌ ನರೇಂದ್ರ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಪಕ್ಷದ ಸಮಾರಂಭವೊಂದರಲ್ಲಿ ಗುರುವಾರ ಮಾತನಾಡಿರುವ ಅವರು, ‘ಮೋದಿ ಅತೀ ಬುದ್ಧಿವಂತರು ಮತ್ತು ಅಷ್ಟೇ ಕುತಂತ್ರಿ. ಒಂದು ವೇಳೆ ಅವರೇನಾದರೂ ಶ್ರೀಲಂಕಕ್ಕೆ ಹೋದರೆ, ರಾವಣನನ್ನು ಕೊಂದಿದ್ದು ನಾನು ಎಂದು ನಮ್ಮನ್ನು ನಂಬಿಸಿಬಿಡುತ್ತಾರೆ. ಇವರನ್ನು ಬಿಟ್ಟು ಮತ್ತ್ಯಾರೂ ಕೆಲಸ ಮಾಡುತ್ತಿಲ್ಲ ಎಂಬಂತೆ ಬಿಂಬಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ,’ ಎಂದು ಅವರು ಹೇಳಿದರು.

‘ನರೇಂದ್ರ ಮೋದಿ ಅವರ ಬಟ್ಟೆಗಳಿಗಾಗಿಯೇ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಮೋದಿ ಅತ್ಯಂತ ದುಬಾರಿ ಟೋಪಿಗಳನ್ನು ಧರಿಸುತ್ತಾರೆ. ಅವುಗಳನ್ನು ನಾವುಗಳು ಖರೀದಿಸಲು ಸಾಧ್ಯವೇ ಇಲ್ಲ. ಅದೆಲ್ಲಿಂದ ಅವುಗಳನ್ನು ತರುತ್ತಾರೋ ನಾನಂತೂ ಕಾಣೆ. ಇಷ್ಟಾದರೂ ಅವರು ನಾನೊಬ್ಬ ಭಿಕ್ಷುಕ ಎಂದು ಯಾವುದೇ ಅಂಕೆ ಇಲ್ಲದೇ ಹೇಳಿಕೊಳ್ಳುತ್ತಾರೆ. ಮೋದಿ ಭಿಕ್ಷುಕರೇ ಆಗಿದ್ದರೇ ನನ್ನನ್ನೂ ಭಿಕ್ಷುಕನನ್ನಾಗಿ ಮಾಡು ಎಂದು ದೇವರಲ್ಲಿ ನಾನು ಕೋರುತ್ತೇನೆ. ಮೋದಿ ಉಣ್ಣುತ್ತಾರೆ, ಧರಿಸುತ್ತಾರೆ, ಸುತ್ತುತ್ತಾರೆ. ಆದರೆ, ಜವಾಬ್ದಾರಿಗಳ ವಿಚಾರ ಬಂದಾಗ ನನೊಬ್ಬ ಭಿಕ್ಷುಕ,‘ ಎನ್ನುತ್ತಾರೆ.

ADVERTISEMENT

‘ದೇಶಕ್ಕೆ ಚೌಕಿದಾರ ಬೇಕಿದ್ದರೆ ನಾವು ನೇಪಾಳದಿಂದ ಕರೆತರೋಣ. ಆದರೆ, ದೇಶಕ್ಕೆ ಬೇಕಿರುವುದು ಪ್ರಧಾನಮಂತ್ರಿ,’ ಎಂದುಅವರು ಮೈ ಭೀ ಚೌಕಿದಾರ್‌ ಅಭಿಯಾನವನ್ನುಗೇಲಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.