ADVERTISEMENT

ಕುಸ್ತಿಪಟುಗಳ ಪ್ರತಿಭಟನೆ: ಇಂದು ‘ಮಹಾಪಂಚಾಯತ್’

ಬಿಕೆಯು ಮುಖಂಡ ನರೇಶ್‌ ಟಿಕಾಯತ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2023, 12:28 IST
Last Updated 31 ಮೇ 2023, 12:28 IST
   

ಮುಜಫ್ಫರನಗರ (ಉತ್ತರಪ್ರದೇಶ): ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಲು ಜಿಲ್ಲೆಯ ಸೋರಮ್‌ ಗ್ರಾಮದಲ್ಲಿ ಗುರುವಾರ ‘ಮಹಾಪಂಚಾಯತ್‌’ ನಡೆಸಲಾಗುವುದು ಎಂದು ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ಮುಖಂಡ ನರೇಶ್‌ ಟಿಕಾಯತ್‌ ಹೇಳಿದ್ದಾರೆ.

‘ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ರಾಜಸ್ಥಾನ ಹಾಗೂ ದೆಹಲಿಯ ಖಾಪ್‌ಗಳ ಮುಖ್ಯಸ್ಥರು ಮಹಾಪಂಚಾಯತ್‌ನಲ್ಲಿ ಭಾಗವಹಿಸುವರು. ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಹೆಜ್ಜೆ ಕುರಿತು ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಭಾಗವಾಗಿ ಕುಸ್ತಿಪಟುಗಳು, ಒಲಿಂಪಿಕ್‌, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಗೆದ್ದಿರುವ ಪದಕಗಳನ್ನು ಗಂಗಾನದಿಯಲ್ಲಿ ಹಾಕಲು ಹರಿದ್ವಾರಕ್ಕೆ ಮಂಗಳವಾರ ತೆರಳಿದ್ದರು. ಆಗ, ನರೇಶ್‌ ಅವರ ಮನವೊಲಿಕೆ ನಂತರ ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ADVERTISEMENT

ಈ ಪ್ರತಿಭಟನಾ ಸ್ಥಳದಲ್ಲಿ ಮಂಗಳವಾರ ರಾತ್ರಿ ಕುಸ್ತಿಪಟುಗಳೊಂದಿಗೆ ಚರ್ಚೆ ನಡೆಸಿದ ನಂತರ ನರೇಶ್‌ ಅವರು ಮಹಾಪಂಚಾಯತ್ ಆಯೋಜಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಬ್ರಿಜ್‌ ಭೂಷಣ್‌ ಸಿಂಗ್

‘ಸಿಂಗ್‌ ವಿರುದ್ಧ ಸಾಕ್ಷ್ಯ ಲಭ್ಯವಾಗಿಲ್ಲ ಎಂಬ ವರದಿ ತಪ್ಪು’

‘ಕೆಲ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ತನಿಖೆ ನಡೆಯುತ್ತಿದೆ. ಅವರ ವಿರುದ್ಧ ಪೊಲೀಸರಿಗೆ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂಬ ವರದಿಗಳು ತಪ್ಪು’ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ‘ಡಬ್ಲ್ಯುಎಫ್‌ಐ ಅಧ್ಯಕ್ಷ ಸಿಂಗ್‌ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿಲ್ಲ. ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಬೇಕಿದೆ ಎಂಬುದಾಗಿ ಕೆಲ ಟಿ.ವಿ ಚಾನೆಲ್‌ಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ ಇದು ತಪ್ಪು ಸುದ್ದಿ. ಸೂಕ್ಷ್ಮವಾಗಿರುವ ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ ಎಂಬುದಾಗಿ ಸ್ಪಷ್ಟಪಡಿಸುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿಯ ಘೋಷಣೆ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅರ್ಥ ಈಗ ‘ಬೇಟಿ ಬಿಜೆಪಿ ಕೆ ನೇತಾವೋ ಸೆ ಬಚಾವೋ’ (ಬಿಜೆಪಿ ನಾಯಕರಿಂದ ಮಗಳನ್ನು ರಕ್ಷಿಸಿ) ಎಂಬಂತಾಗಿದೆ.
ದೀಪೇಂದರ್ ಹೂಡಾ, ಕಾಂಗ್ರೆಸ್‌ ಸಂಸದ

ಪೋಕ್ಸೊ ಕಾಯ್ದೆ ಬ್ರಿಜ್‌ಭೂಷಣ್‌ಸಿಂಗ್‌ಗೆ ಅನ್ವಯವಾಗದೇ?: ಸಿಬಲ್

ಪೋಕ್ಸೊ ಕಾಯ್ದೆ ಹಾಗೂ ತಕ್ಷಣ ಬಂಧನದಂತಹ ಕ್ರಮಗಳು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ಬಿಟ್ಟು ಉಳಿದ ಎಲ್ಲ ಆರೋಪಿಗಳಿಗೆ ಮಾತ್ರ ಅನ್ವಯವಾಗುತ್ತವೆಯೇ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಬುಧವಾರ ಪ್ರಶ್ನಿಸಿದ್ದಾರೆ. ಕೆಲ ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್‌ಭೂಷಣ್‌ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳ ವಿಚಾರವಾಗಿ ಸಿಬಲ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ‘ಬ್ರಿಜ್‌ಭೂಷಣ್‌ ಸಿಂಗ್‌ ಅವರು ಬಿಜೆಪಿಗೆ ಸೇರಿದವರಾಗಿರುವ ಕಾರಣ ಅವರಿಗೆ ಪೋಕ್ಸೊ ಕಾಯ್ದೆ ಮತ್ತು ತಕ್ಷಣ ಬಂಧನದಂತಹ ಕ್ರಮ ಅನ್ವಯವಾಗುವುದಿಲ್ಲವೇ? ಖ್ಯಾತನಾಮರಾದ ಕುಸ್ತಿಪಟುಗಳಿಗಿಂತ ಮತಗಳೇ ಮುಖ್ಯವಾಗಿವೆ ಹಾಗೂ ಈ ಪ್ರಕರಣದ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನನ್ನ ನವ ಭಾರತವೇ?’ ಎಂದಿದ್ದಾರೆ. ಸಿಬಲ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಕುಸ್ತಿಪಟುಗಳ ಪರ ವಾದ ಮಂಡಿಸಿದ್ದರು.

ಬ್ರಿಜ್‌ಭೂಷಣ್‌ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿರುವ ಬಾಲಕಿಯ ಗುರುತು ಬಹಿರಂಗ ಮಾಡಿದ್ದಾರೆ ಎನ್ನಲಾದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲೀವಾಲ್ ಪೊಲೀಸರಿಗೆ ನೋಟಿಸ್‌ ನೀಡಿದ್ದಾರೆ. ಬಿಜೆಪಿಯ ಘೋಷಣೆ ‘ಬೇಟಿ ಬಚಾವೋ ಬೇಟಿ ಪಢಾವೋ’ ಅರ್ಥ ಈಗ ‘ಬೇಟಿ ಬಿಜೆಪಿ ಕೆ ನೇತಾವೋ ಸೆ ಬಚಾವೋ’ (ಬಿಜೆಪಿ ನಾಯಕರಿಂದ ಮಗಳನ್ನು ರಕ್ಷಿಸಿ) ಎಂಬಂತಾಗಿದೆ ಎಂದು ಕಾಂಗ್ರೆಸ್‌ ಸಂಸದ ದೀಪೇಂದರ್ ಹೂಡಾ ಟೀಕಿಸಿದ್ದಾರೆ.

ಕ್ರೀಡೆ ಹಾಳು ಮಾಡುವ ಕ್ರಮ ಬೇಡ: ಠಾಕೂರ್

ಕ್ರೀಡೆಯನ್ನು ಹಾಳು ಮಾಡುವ ಅಥವಾ ಕ್ರೀಡಾಪಟುಗಳಿಗೆ ನೋವುಂಟು ಮಾಡುವಂತಹ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮನವಿ ಮಾಡಿದ್ದಾರೆ.

‘ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ನಡೆಯುತ್ತಿರುವ ತನಿಖೆ ಪೂರ್ಣಗೊಂಡ ನಂತರ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಭಾರತೀಯ ಕುಸ್ತಿ ಫಡರೇಷನ್‌ಗೆ ಶೀಘ್ರವೇ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.