ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹಲವಾರು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಪಟ್ಟಿ ಹಾಗೂ ದೋಷಾರೋಪ ನಿಗದಿ ಮಾಡಿರುವುದನ್ನು ಕೈಬಿಡುವಂತೆ ಕೋರಿ ಮನವಿ ಸಲ್ಲಿಸಲು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಸಮಯಾವಕಾಶ ನೀಡಿ ಗುರುವಾರ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ, ಎರಡು ವಾರಗಳ ಒಳಗಾಗಿ ಮನವಿ ಸಲ್ಲಿಸುವಂತೆ ಬ್ರಿಜ್‌ಭೂಷಣ್ ಸಿಂಗ್ ಅವರಿಗೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ, ರಾಜ್ಯ ಸರ್ಕಾರ ಮತ್ತು ಅರ್ಜಿದಾರರ ಪರ ಹಾಜರಿದ್ದ ವಕೀಲರು, ಬ್ರಿಜ್‌ಭೂಷಣ್ ಸಿಂಗ್ ಅವರ ಅರ್ಜಿಯನ್ನು ವಿರೋಧಿಸಿದರು.
‘ತಮ್ಮ ವಿರುದ್ಧ ನಿಗದಿ ಮಾಡಿರುವ ದೋಷಾರೋಪಗಳನ್ನು ಪ್ರಶ್ನಿಸಿ ಹಾಗೂ ಎಫ್‌ಐಆರ್ ಮತ್ತು ಆರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಬ್ರಿಜ್‌ಭೂಷಣ್ ಸಿಂಗ್ ಒಂದೇ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿ ಸಮಗ್ರವಾದ ಆದೇಶ ನೀಡಲು ಸಾಧ್ಯವಿಲ್ಲ. ಪ್ರಕರಣ ಕುರಿತು ವಿಚಾರಣೆ ಆರಂಭವಾದ ನಂತರ ಅರ್ಜಿದಾರ ಪ್ರತಿಯೊಂದನ್ನೂ ಈಗ ಪ್ರಶ್ನಿಸುತ್ತಿದ್ದಾರೆ’ ಎಂದು ನ್ಯಾಯಾಧೀಶೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಜ್‌ಭೂಷಣ್ ಸಿಂಗ್ ವಕೀಲ ರಾಜೀವ್ ಮೋಹನ್, ‘ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಕೆಳಗಿಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ’ ಎಂದು ತಿಳಿಸಿದರು.
ಆಗ, ‘ಅರ್ಜಿದಾರರು ಈಗ ನೀಡುತ್ತಿರುವ ಎಲ್ಲ ಹೇಳಿಕೆಗಳನ್ನು, ಅವರ ವಿರುದ್ಧ ದೋಷಾರೋಪ ನಿಗದಿ ಮಾಡುವ ವೇಳೆ ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿತ್ತು’ ಎಂದು ನ್ಯಾಯಾಧೀಶೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.