ADVERTISEMENT

ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 18:47 IST
Last Updated 24 ಜೂನ್ 2022, 18:47 IST
   

ನವದೆಹಲಿ:ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಕನ್ನಡದ ಹಿರಿಯ ಲೇಖಕಡಾ. ಗುರುಲಿಂಗ ಕಾಪಸೆ ಆಯ್ಕೆಯಾಗಿದ್ದಾರೆ. ಲೇಖಕರಾದ ಪ್ರೊ.ಧರಣೇಂದ್ರ ಕುರಕುರಿ, ಗೀತಾ ಆರ್.ಶೆಣೈ, ಶತಾವಧಾನಿ ಆರ್‌.ಗಣೇಶ್ ಹಾಗೂ ಬಿ.ಎನ್‌.ಶಶಿಕಿರಣ್‌ ಅವರಿಗೆ ಸಹ ಅನುವಾದ ಪ್ರಶಸ್ತಿಗೆ ಪಾತ್ರರಾಗಿದ್ದರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಪ್ರತಿ ಪ್ರಶಸ್ತಿಯು ₹50 ಸಾವಿರ, ಸ್ಮತಿ ಫಲಕ ಒಳಗೊಂಡಿದೆ.

ವಿ.ಸ. ಖಾಂಡೇಕರ್ ಅವರ 'ಒಂದು ಪುಟದ ಕಥೆ'ಯನ್ನುಡಾ.ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಒಂದು ಪುಟದ ಕಥೆ' (ಮೂಲ: 'ಏಕ ಪಾನಾಚಿ ಕಹಾಣಿ) ಖಾಂಡೇಕರ್ ಅವರ ಆತ್ಮಕಥೆ.

ADVERTISEMENT

ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತೀಯ ಸ್ಥಿತಿಗತಿಗಳ ಸಮಗ್ರ ವಿವರಣೆ ನೀಡುತ್ತದೆ.

ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕ ಡಾ. ಸರಜೂ ಕಾಟ್ಕರ್, ಸದಸ್ಯರಾದ ಡಾ.ಬಸವರಾಜ ಕಲ್ಗುಡಿ, ಬಿ.ಆರ್. ಲಕ್ಷ್ಮಣರಾವ್ ಹಾಗೂ ಡಾ ಸುಬ್ಬು ಹೊಲೆಯಾರ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಕಾಪಸೆ ಅವರನ್ನು ಆಯ್ಕೆ ಮಾಡಿದೆ.

ಪ್ರೊ.ಧರಣೇಂದ್ರ ಕುರಕುರಿ ಅವರುಬಸವರಾಜ ಕಟ್ಟಿಮನಿ ಅವರ ‘ಜ್ವಾಲಾಮುಖಿ ಮೇಲೆ’ ಕೃತಿಯನ್ನು ಕನ್ನಡದಿಂದ ಹಿಂದಿಗೆ ಅನುವಾದ ಮಾಡಿದ್ದಾರೆ. ಅವರಿಗೆ ಹಿಂದಿ ವಿಭಾಗ
ದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗೀತಾ ಶೆಣೈ ಅವರು ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಕೃತಿಯನ್ನು ಕನ್ನಡದಿಂದ ಕೊಂಕಣಿಗೆ ಅನುವಾದ ಮಾಡಿದ್ದಾರೆ. ಅವರಿಗೆ ಕೊಂಕಣಿ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ.

ದೇವುಡು ನರಸಿಂಹ ಶಾಸ್ತ್ರಿ ಅವರ ‘ಮಹಾಬ್ರಾಹ್ಮಣ’ ಕಾದಂಬರಿಯನ್ನು ಶತಾವಧಾನಿ ಆರ್. ಗಣೇಶ್‌ ಹಾಗೂ ಬಿ.ಎನ್‌.ಶಶಿಕಿರಣ್‌ ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಸಂಸ್ಕೃತ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಮಹತ್ವದ ಕೃತಿಗೆ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ: ಡಾ.ಗುರುಲಿಂಗ ಕಾಪಸೆ

ಧಾರವಾಡ: ‘ಮರಾಠಿಯ ಜ್ಞಾನಪೀಠ ಪುರಸ್ಕೃತ ಸಾಹಿತಿ ವಿ.ಸ.ಖಾಂಡೇಕರ್ ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟದ ದಿನಗಳು ‘ಒಂದು ಪುಟದ ಕಥೆ’ ಕೃತಿಯಲ್ಲಿದೆ. ಇಂಥ ಮಹತ್ವದ,ದೇಶಿಯ ಸೊಗಡಿನ ಕೃತಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷದ ವಿಚಾರ’ ಎಂದು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಅನುವಾದ ಪ್ರಶಸ್ತಿ’ಗೆ ಆಯ್ಕೆಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ‘ಈ ಕೃತಿಯನ್ನು ನಾನು ಬರೆದಿದ್ದೇ ಆಕಸ್ಮಿಕ. ಖಾಂಡೇಕರ್ ಅವರ ಕೃತಿಗಳನ್ನು ಓದಿದ್ದೆ. ವಿಭಿನ್ನ ಹಾಗೂ ಶ್ರೇಷ್ಠ ಕೃತಿಯಾದ ಇದನ್ನು ಅನುವಾದಿಸುವಂತೆ ಮನೋಹರ ಗ್ರಂಥಮಾಲೆಯ ಡಾ.ರಮಾಕಾಂತ ಜೋಶಿ ಅವರು ಕೊಟ್ಟರು. ಕೃತಿಗೆ ಪ್ರಶಸ್ತಿ ಬರುವ ನಿರೀಕ್ಷೆ ಇರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.