ADVERTISEMENT

ಕೊಲಿಜಿಯಂನಲ್ಲಿ ಪಾರದರ್ಶಕತೆ ಇಲ್ಲ ಎನ್ನುವುದು ಸರಿಯಲ್ಲ: CJI ಡಿ.ವೈ. ಚಂದ್ರಚೂಡ್

ಪಿಟಿಐ
Published 1 ಜನವರಿ 2024, 13:59 IST
Last Updated 1 ಜನವರಿ 2024, 13:59 IST
<div class="paragraphs"><p>ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್</p></div>

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

   

ಪ್ರಜಾವಾಣಿ ಚಿತ್ರ

ನವದೆಹಲಿ: ‘ನ್ಯಾಯಾಂಗದ ಉನ್ನತ ಸಂಸ್ಥೆಗಳಿಗೆ ನ್ಯಾಯಮೂರ್ತಿಗಳಿಂದ ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ತರಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

ADVERTISEMENT

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಯಾವುದೇ ಒಂದು ವ್ಯವಸ್ಥೆಯನ್ನು ಟೀಕಿಸುವುದು ಸುಲಭ. ಆದರೆ ನ್ಯಾಯಮೂರ್ತಿಗಳ ನೇಮಕಕ್ಕೂ ಪೂರ್ವದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನ್ಯಾಯಮೂರ್ತಿಗಳು ಸೂಕ್ತ ಸಮಾಲೋಚನೆ ಪ್ರಕ್ರಿಯೆ ನಡೆಸುವುದು ಕೊಲಿಜಿಯಂನ ಕಾರ್ಯವೈಖರಿ’ ಎಂದಿದ್ದಾರೆ.

‘ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳುವುದು ಸರಿಯಲ್ಲ. ನ್ಯಾಯಮೂರ್ತಿಗಳ ನೇಮಕದಲ್ಲಿ ಎಲ್ಲಾ ರೀತಿಯ ಪಾರದರ್ಶಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ, ಹೈಕೋರ್ಟ್‌ನಲ್ಲಿ ಹಾಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳ ವೃತ್ತಿಯ ಭವಿಷ್ಯ ಕುರಿತೂ ಯೋಚಿಸುತ್ತೇವೆ’ ಎಂದಿದ್ದಾರೆ.

‘ಆದರೆ ಕೊಲಿಜಿಯಂ ಒಳಗೆ ನಡೆಯುವ ಚರ್ಚೆಗಳ ವಿವರಗಳನ್ನು ಹಲವಾರು ಕಾರಣಗಳಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ. ಇದರಲ್ಲಿ ಬಹುತೇಕ ಚರ್ಚೆಗಳು ನೇಮಕಗೊಳ್ಳುವವರ ಗೋಪ್ಯತೆ ಕುರಿತಾಗಿಯೇ ಇರುತ್ತದೆ. ಈ ಪ್ರಕ್ರಿಯೆ ಒಂದೊಮ್ಮೆ ಮುಕ್ತವಾಗಿರಬೇಕಾದರೆ ಅಲ್ಲಿ ಚಿತ್ರೀಕರಣ ಹಾಗೂ ದಾಖಲಾತಿಯ ಪ್ರಕ್ರಿಯೆ ಇರಬಾರದು. ಭಾರತದ ಸಂವಿಧಾನ ಇಂಥ ಪ್ರಕ್ರಿಯೆಯನ್ನು ಒಳಗೊಂಡಿಲ್ಲ’ ಎಂದು ನ್ಯಾ. ಚಂದ್ರಚೂಡ್ ಸ್ಪಷ್ಟಪಡಿಸಿದರು.

‘ನಮ್ಮದು ವೈವಿಧ್ಯಮಯ ಸಮಾಜ ಎಂಬುದನ್ನು ಅರಿತು, ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಂಬುವುದನ್ನು ನಾವು ಮೊದಲು ಕಲಿಯಬೇಕಿದೆ’ ಎಂದರು.

‘1993ರಿಂದ ನ್ಯಾಯಮೂರ್ತಿಗಳ ನೇಮಕಕ್ಕೆ ನಾವು ಕೊಲಿಜಿಯಂ ವ್ಯವಸ್ಥೆಯನ್ನು ಹೊಂದಿದ್ದೇವೆ. ಕೊಲಿಜಿಯಂ ಭಾಗವಾಗಿರುವ ನಮಗೆ ಅದು ಸಂಪೂರ್ಣ ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದರು.

‘ಸಾರ್ವಜನಿಕರ ಗಮನಕ್ಕಾಗಿ ಕೊಲಿಜಿಯಂ ಕೈಗೊಳ್ಳುವ ನಿರ್ಣಯಗಳನ್ನು ನಮ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸುತ್ತೇವೆ. ಇದು ಕೂಡಾ ಪಾರದರ್ಶಕತೆಯ ಒಂದು ಪರಿ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.