ADVERTISEMENT

ಯಸ್ ಚಂಡಮಾರುತ: ಸುರಕ್ಷಿತ ಪ್ರದೇಶಕ್ಕೆ ಲಕ್ಷಾಂತರ ಮಂದಿಯ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಮೇ 2021, 17:10 IST
Last Updated 25 ಮೇ 2021, 17:10 IST
ಎನ್‌ಡಿಆರ್ಎ‌ಫ್‌ ಕಾರ್ಯಾಚರಣೆ
ಎನ್‌ಡಿಆರ್ಎ‌ಫ್‌ ಕಾರ್ಯಾಚರಣೆ   

ಕೋಲ್ಕತಾ: ಯಸ್‌ ಚಂಡಮಾರುತವು ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್‌ ಜಿಲ್ಲೆಯ ಧಾಮರಾ ಬಂದರಿಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಒಡಿಶಾದ ಬಾಲಸೂರ್ಜಿಲ್ಲೆಯಲ್ಲಿ ಅತಿ ಹೆಚ್ಚು 74,132 ಮಂದಿಯನ್ನು, ನಂತರ ಭದ್ರಕ್‌ ಜಿಲ್ಲೆಯಲ್ಲಿ 73,103 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಪಕ್ಕದ ಜಾರ್ಖಂಡ್‌ ರಾಜ್ಯದಲ್ಲೂ ಯಸ್‌ ಚಂಡಮಾರುತ ಪರಿಣಾಮ ಬೀರಬಹುದಾದ ಸಾಧ್ಯತೆಯಿದ್ದು, ಈಗಾಗಲೇ ಪರಿಸ್ಥಿತಿ ಎದುರಿಸಲು ಸಿದ್ಧರಿರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ 9 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ರಾಜ್ಯದಲ್ಲಿ 4 ಸಾವಿರ ಪ್ರವಾಹ ಸಂತ್ರಸ್ತರ ಕೇಂದ್ರಗಳಿವೆ ಎಂದು ಮಂಗಳವಾರ ಹೇಳಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 74 ಸಾವಿರ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿಯನ್ನು ನಿಯೋಚಿಸಲಾಗಿದೆ. 2 ಲಕ್ಷ ಪೊಲೀಸರು ಮತ್ತು ಸ್ವಯಂ ಸೇವಕರು ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದಾರೆ. ಅಗತ್ಯ ಬಿದ್ದರೆ ಸೇನೆಯ ನೆರವನ್ನು ಕೇಳಲಾಗುವುದು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಮತ್ತೊಂದೆಡೆ ಒಡಿಶಾ ಸರಕಾರವು ಕರಾವಳಿ ಜಿಲ್ಲೆಗಳಿಂದ ಸುಮಾರು 2 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ.

ಯಸ್‌ ಚಂಡಮಾರುತ ಭಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಚಂಡಮಾರುತ ಅಪ್ಪಳಿಸುವ 6 ಗಂಟೆ ಮೊದಲು ಮತ್ತು ಅಪ್ಪಳಿಸಿದ ಬಳಿಕ ಹೆಚ್ಚಿನ ಪ್ರಮಾಣದ ದುಷ್ಪರಿಣಾಮ ಸಂಭವಿಸಲಿದೆ. ಒಡಿಶಾದ ಚಾಂದಬಾಲೀ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಡಾ. ಮೃತ್ಯುಂಜಯ ಮೊಹಪತ್ರ ತಿಳಿಸಿದ್ದಾರೆ.

ಒಡಿಶಾದ ಭದ್ರಕ್‌ ಜಿಲ್ಲೆಯ ಧಾಮರಾ ಮತ್ತು ಚಾಂದಬಾಲೀ ಪ್ರದೇಶಗಳ ನಡುವೆ ಯಸ್ ಚಂಡಮಾರುತ ಅಪ್ಪಳಿಸಲಿದೆ ಎಂದು ಭುವನೇಶ್ವರದಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಉಮಾಶಂಕರ್‌ ದಾಸ್‌ ಹೇಳಿದ್ದಾರೆ.

ಒಡಿಶಾದಲ್ಲಿ 52 ಎನ್‌ಡಿಆರ್‌ಎಫ್‌ ಪಡೆ, 60 ರಾಜ್ಯದ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ 404 ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ. 10,000 ವಿದ್ಯುತ್‌ ಸಿಬ್ಬಂದಿ, 205 ಅಗ್ನಿಶಾಮಕ ದಳದ ತಂಡಗಳು ಮತ್ತು ಮರ ತೆರವು ಕಾರ್ಯಾಚರಣೆಗೆ 86 ತಂಡಗಳನ್ನು ನೇಮಿಸಲಾಗಿದೆ ಎಂದು ಸಚಿವ ಪ್ರತಾಪ್‌ ಜೆನಾ ತಿಳಿಸಿದ್ದಾರೆ.

ಕರಾವಳಿ ಪ್ರದೇಶದ 30 ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಇದುವರೆಗೆ 50 ಎಂಎಂ ಮಳೆಯಾಗಿದೆ. ಜಗತ್‌ಸಿಂಗ್‌ಪುರದಲ್ಲಿ ಅತಿಹೆಚ್ಚು ಮಳೆಯಾಗಿದೆ ಎಂದು ಜೆನಾ ಮಾಹಿತಿ ನೀಡಿದ್ದಾರೆ.

5,000 ಗರ್ಭಿಣಿಯರು
ಜೂನ್‌ 1ಕ್ಕೆ ಜನ್ಮ ನೀಡುವ ನಿರೀಕ್ಷೆಯಲ್ಲಿರುವ ಸುಮಾರು 5,000 ಗರ್ಭಿಣಿಯರನ್ನುಆಸ್ಪತ್ರೆಗೆದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.