ಕೋಲ್ಕತಾ: ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ಶಕ್ತಿಶಾಲಿ 'ಯಸ್' ಚಂಡಮಾರುತ ಅಂಫಾನ್‌ನಷ್ಟು ಭೀಕರವಾಗಿರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಜನತೆಗೆ ಧೈರ್ಯ ತುಂಬಿದ್ದಾರೆ.
165 ಕಿ.ಮೀ. ವೇಗದಲ್ಲಿ ಬರುತ್ತಿರುವ ಯಸ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮೇಲೆ ಬುಧವಾರ ಮಧ್ಯಾಹ್ನದ ವೇಳೆಗೆ ಅಪ್ಪಳಿಸುವಾಗ ವೇಗ ಕುಂಠಿತಗೊಂಡಿರುತ್ತದೆ. ಗಾಳಿಯ ವೇಗವು ಹೆಚ್ಚೆಂದರೆ ಗಂಟೆಗೆ 65-75 ಕಿ.ಮೀ. ವೇಗವಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ರಾಜ್ಯದ ಮೇಲೂ ಯಸ್ ಚಂಡಮಾರುತ ಪರಿಣಾಮ ಬೀರಬಹುದಾದ ಸಾಧ್ಯತೆಯಿದ್ದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗುವಂತೆ ಎಚ್ಚರಿಕೆ ನೀಡಲಾಗಿದೆ.
ಕೋಲ್ಕತಾದ ನಬನ್ನಾದಲ್ಲಿರುವ ಯಸ್ ಚಂಡಮಾರುತ ನಿರ್ವಹಣಾ ಕೊಠಡಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು. ಇದೇ ವೇಳೆ ರಾಜ್ಯದ ಸುಮಾರು 9 ಲಕ್ಷ ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿರುವ ಯಸ್ ಚಂಡಮಾರುತದಿಂದಾಗಿ ಇದುವರೆಗೆ ಉಭಯ ರಾಜ್ಯಗಳಿಂದ ಸುಮಾರು 20 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಪಶ್ಚಿಮ ತೀರದಲ್ಲಿ ತೌತೆ ಚಂಡಮಾರುತದಿಂದ 155 ಮಂದಿ ಪ್ರಾಣ ಕಳೆದುಕೊಂಡ ಒಂದೇ ವಾರದಲ್ಲಿ ಯಸ್ ಚಂಡಮಾರುತದ ಸೃಷ್ಟಿಯು ಭಾರಿ ಆತಂಕವನ್ನು ತಂದೊಡ್ಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.