ಹೈದರಾಬಾದ್: ತೆಲಂಗಾಣದ ತಿರುಮಲ ಎಂದೇ ಪ್ರಸಿದ್ಧಿ ಪಡೆದಿರುವ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಾದ್ರಿ ದೇವಾಲಯದ ಹೆಸರನ್ನು ಯಾದಗಿರಿ ದೇವಾಲಯ ಎಂದು ಬದಲಿಸಲು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಮ್ಮ ಜನ್ಮದಿನದ ಅಂಗವಾಗಿ ಯಾದಗಿರಿಗುಟ್ಟದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ದೇವಾಲಯದ ಹೆಸರನ್ನು ಯಾದಗಿರಿ ಎಂದು ಬದಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ದೇವಾಲಯದ ನಿರ್ವಹಣೆಗಾಗಿ ಯಾದಗಿರಿಗುಟ್ಟ ದೇವಸ್ಥಾನ ಮಂಡಳಿ ಸ್ಥಾಪಿಸುವಂತೆಯೂ ನಿರ್ದೇಶಿಸಿದರು.
ಆಂಧ್ರಪ್ರದೇಶದ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ನಿರ್ವಹಣೆಗೆ ರಚನೆಗೊಂಡಿರುವ ತಿರುಮಲ ತಿರುಪತಿ ದೇವಸ್ಥಾನದಂತೆಯೇ (TTD) ಯಾದಗಿರಿ ಗುಟ್ಟ ದೇವಾಲಯ ಮಂಡಳಿಯೂ ಕಾರ್ಯ ನಿರ್ವಹಿಸಬೇಕು. ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಬೆಟ್ಟದಲ್ಲಿ ತಂಗುವ ಭಕ್ತಾಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನ ಮೂಲಕ ಪಡೆಯಲು ಯೋಜನೆ ರೂಪಿಸಬೇಕು. ಇದಕ್ಕೆ ಹೆಚ್ಚುವರಿ ಹಣದ ಅಗತ್ಯವಿದ್ದಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದರು. ಗೋವು ಹಾಗೂ ಗೋಶಾಲೆಗಳ ರಕ್ಷಣೆಗೆ ತಂತ್ರಜ್ಞಾನ ಆಧಾರಿತ ವಿಶೇಷ ನೀತಿ ರೂಪಿಸಬೇಕು. ದೇವಾಲಯದ ವಿಮಾನ ಗೋಪುರಕ್ಕೆ 125 ಕೆ.ಜಿ. ಚಿನ್ನದ ಹೊದಿಕೆ ಹಾಕಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಭ್ರಹ್ಮೋತ್ಸವ ವೇಳೆಗೆ ಕಾರ್ಯ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೇಳಿದರು.
2014ರಲ್ಲಿ ರಚನೆಗೊಂಡ ತೆಲಂಗಾಣದ ಮೊದಲ ಸರ್ಕಾರದ ಮೊದಲ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಯಾದಗಿರಿ ಹೆಸರನ್ನು ಯಾದಾದ್ರಿ ಎಂದು ಬದಲಿಸಿದ್ದರು. ಹೈದರಾಬಾದ್‌ನಿಂದ 55 ಕಿ.ಮೀ. ದೂರ ಇರುವ ಯಾದಗಿರಿಗುಟ್ಟ ದೇವಾಲಯವು ತೆಲಂಗಾಣದ ತಿರುಮಲ ಎಂದೇ ಕರೆಯಲಾಗುತ್ತದೆ. ತಿರುಮಲ ದೇವಾಲಯದಂತೆಯೇ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದರು. ₹1,800 ಕೋಟಿ ವೆಚ್ಚದ ನವೀಕರಣ ಕಾರ್ಯಕ್ಕೆ 2016ರಲ್ಲಿ ಚಾಲನೆ ದೊರೆಯಿತು. 2022ರಲ್ಲಿ ನವೀಕೃತ ದೇವಾಲಯವನ್ನು ಕೆಸಿಆರ್ ಉದ್ಘಾಟಿಸಿದ್ದರು. ಹೀಗಾಗಿ ಆರು ವರ್ಷಗಳ ನಂತರ ಗರ್ಭಗುಡಿಯನ್ನು ತೆರೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.