ADVERTISEMENT

ದೆಹಲಿ: ಮತ್ತೆ ಅಪಾಯದ ಮಟ್ಟ ತಲುಪಿದ ಯುಮುನಾ ನದಿ

ಪಿಟಿಐ
Published 19 ಜುಲೈ 2023, 5:18 IST
Last Updated 19 ಜುಲೈ 2023, 5:18 IST
ಯಮುನಾ ನದಿ (ಚಿತ್ರ: ಪಿಟಿಐ)
ಯಮುನಾ ನದಿ (ಚಿತ್ರ: ಪಿಟಿಐ)   

ನವದೆಹಲಿ: ದೆಹಲಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 12 ಗಂಟೆಗಳ ಹಿಂದೆ ತಗ್ಗಿದ್ದ ಯಮುನಾ ನದಿ ನೀರಿನ ಮಟ್ಟ ಬುಧವಾರ ಬೆಳಿಗ್ಗೆ ಮತ್ತೆ ಅಪಾಯದ ಮಟ್ಟ ತಲುಪಿದೆ.

ಬುಧವಾರ ಬೆಳ್ಳಿಗ್ಗೆ 8 ಗಂಟೆಯ ಸುಮಾರಿಗೆ ನೀರಿನ ಮಟ್ಟ 205.48 ಮೀಟರ್ ತಲುಪಿದೆ ಎಂದು ಕೇಂದ್ರ ಜಲ ಆಯೋಗದ ಅಂಕಿ ಅಂಶಗಳು ತಿಳಿಸಿವೆ. ಸಂಜೆ 6 ಗಂಟೆಯ ಹೊತ್ತಿಗೆ ನೀರಿನ ಮಟ್ಟ 205.72 ಮೀಟರ್‌ ಏರಿಕೆಯಾಗುವ ಸಾಧ್ಯತೆಯಿದೆ.

ಎಂಟು ದಿನಗಳ ಕಾಲ ಮಿತಿ ಮೀರಿ ಹರಿಯುತ್ತಿದ್ದ ಯಮುನಾ ನದಿ ನೀರಿನ ಮಟ್ಟ ಮಂಗಳವಾರ ರಾತ್ರಿ 8 ಗಂಟೆಗೆ ಹೊತ್ತಿಗೆ ತಗ್ಗಿತ್ತು. ಬುಧವಾರ ಮುಂಜಾನೆ 5 ಗಂಟೆಗೆ ನೀರಿನ ಮಟ್ಟ 205.22 ಮೀಟರ್‌ಗೆ ಇಳಿದಿದ್ದು, 8 ಗಂಟೆಯ ಹೊತ್ತಿಗೆ ಮತ್ತೆ ಏರಿಕೆ ಕಂಡು 205.48 ಮೀಟರ್‌ಗೆ ತಲುಪಿದೆ. ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಒಳ ಹರಿವಿನ ಪ್ರಮಾಣ ಬುಧವಾರ ಬೆಳಿಗ್ಗೆ ಕಡಿಮೆಯಾಗಿದೆ.

ADVERTISEMENT

ಯುಮುನೆಯಲ್ಲಿನ ನೀರಿನ ಮಟ್ಟ ಹೆಚ್ಚಳ ತಗ್ಗು ಪ್ರದೇಶದ ಜನರಲ್ಲಿ ಮತ್ತೆ ಭೀತಿ ಹುಟ್ಟಿಸಿದೆ. ನೀರಿನ ಮಟ್ಟ ಹೆಚ್ಚಳವಾದರೆ ಹಲವು ದಿನಗಳ ಕಾಲ ಪರಿಹಾರ ಶಿಬಿರಗಳಲ್ಲಿ ಕಳೆಯುವುದು ಅನಿವಾರ್ಯವಾಗುತ್ತದೆ. ಅಲ್ಲದೇ ಕುಡಿಯುವ ನೀರಿನ ಸರಬರಾಜಿನ ಮೇಲೂ ಇದು ಪರಿಣಾಮ ಬೀರಲಿದೆ ಎಂದು ದೆಹಲಿ ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಲೈ 13ರಂದು ಯಮುನಾ ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, 208.66 ಮೀಟರ್‌ಗೆ ಏರಿಕೆ ಕಂಡಿತ್ತು. ಎಂಟು ದಿನಗಳ ನಂತರ ಅಂದರೆ ಸೋಮವಾರ ನದಿ ನೀರಿನ ಮಟ್ಟ ಸ್ವಲ್ಪ ಇಳಿಕೆ ಕಂಡಿತ್ತು. 1978ರಲ್ಲಿ ಸುರಿದ ಭಾರಿ ಮಳೆಗೆ ಯಮುನಾ ನದಿ ನೀರಿನ ಮಟ್ಟ 207.49 ಮೀಟರ್‌ ತಲುಪಿತ್ತು.

ಜುಲೈ 22 ರವರೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದದಲ್ಲಿ ಭಾರೀ ಮಳೆ ಮತ್ತು ದೆಹಲಿಯಲ್ಲಿ ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.