ಅರುಣ್ ಜೇಟ್ಲಿ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ನೋಟು ಅಮಾನ್ಯೀಕರಣ, ಜಿಎಸ್‌ಟಿ ಎಡವಟ್ಟುಗಳಿಂದ 'ದೇಶದ ಅರ್ಥ ವ್ಯವಸ್ಥೆ ಅಸ್ತವ್ಯಸ್ತ' ಆಗಿರುವುದಾಗಿ 2017ರಲ್ಲಿ ಪತ್ರಿಕೆಯ ಲೇಖನವೊಂದರ ಮೂಲಕ ಯಶವಂತ್ ಸಿನ್ಹಾ ಟೀಕಿಸಿದ್ದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಜೇಟ್ಲಿ, '80ನೇ ವಯಸ್ಸಿನಲ್ಲಿ ಹುದ್ದೆಯ ಆಕಾಂಕ್ಷಿ' ಎಂದು ಸಿನ್ಹಾ ಅವರನ್ನು ಮೂದಲಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಿನ್ಹಾ ಮತ್ತು ಜೇಟ್ಲಿ ಸಚಿವರಾಗಿದ್ದವರು. ಆದರೆ, 2014ರಲ್ಲಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ಸಿನ್ಹಾ ಅವರಿಗೆ ಟಿಕೆಟ್ ನಿರಾಕರಿಸಿದರು. ಜಾರ್ಖಂಡ್‌ನ ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಸಿನ್ಹಾ ಅವರ ಬದಲು ಅವರ ಹಿರಿಯ ಮಗ ಜಯಂತ್‌ಗೆ ಚುನಾವಣೆಯ ಟಿಕೆಟ್ ನೀಡಲಾಯಿತು. ಐಐಟಿಯಲ್ಲಿ ಶಿಕ್ಷಣ ಪಡೆದಿರುವ ಜಯಂತ್, ಸಂಸದರಾಗಿ ಆಯ್ಕೆಯಾದ ಬಳಿಕ ಕೇಂದ್ರ ಸಚಿವ ಸ್ಥಾನ ದೊರೆಯಿತು.
ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಿಜೆಪಿಯೊಳಗೆ ಮರೆಗೆ ಸರಿಯುತ್ತಿದ್ದಂತೆ, ಪಟನಾದಲ್ಲಿ 2018ರ ಕಾರ್ಯಕ್ರಮದಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದರು. 'ಇಲ್ಲಿಂದ ಮುಂದೆ, ನಾನು ಯಾವುದೇ ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಪಡೆಯುವುದಿಲ್ಲ' ಎಂದು ಘೋಷಿಸಿದರು.
ಇಂಧನ ಬೆಲೆ ಏರಿಕೆಯನ್ನು ಹಿಂಪಡೆಯುವ ಮೂಲಕ 'ನಿರ್ಧಾರ ಹಿಂಪಡೆಯುವ ಹಣಕಾಸು ಸಚಿವ' ಎಂದೂ ಕರೆಸಿಕೊಂಡಿದ್ದ ಸಿನ್ಹಾ, ರಾಜಕೀಯ ನಿವೃತ್ತಿ ನಿರ್ಧಾರವನ್ನೂ ಹಿಂಪಡೆದರು. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದ ಅವರು ಪಕ್ಷದ ಉಪಾಧ್ಯಕ್ಷರೂ ಆದರು. ಈಗ ತೃಣಮೂಲ ಕಾಂಗ್ರೆಸ್ ತೊರೆದಿರುವ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಹಲವು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಈಗ ಅವರಿಗೆ 84 ವರ್ಷ ವಯಸ್ಸು.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಿಗದಿಯಾಗಿದೆ. 'ಟಿಎಂಸಿಯಲ್ಲಿ ನನ್ನನ್ನು ಘನತೆಯಿಂದ ಮತ್ತು ಗೌರವಯುವಾಗಿ ನಡೆಸಿಕೊಂಡ ಮಮತಾ ಜೀ ಅವರಿಗೆ ಆಭಾರಿಯಾಗಿದ್ದೇನೆ. ಈಗ ರಾಷ್ಟ್ರಕ್ಕೆ ಸಂಬಂಧಿಸಿದ ದೊಡ್ಡ ಕಾರ್ಯದ ಉದ್ದೇಶದಿಂದ ಪಕ್ಷದಿಂದ ಹೊರ ಬಂದು ವಿಪಕ್ಷದ ಒಗ್ಗಟ್ಟಿಗಾಗಿ ಶ್ರಮಿಸು ಕಾಲ ಬಂದಿದೆ. ಅವರು ಈ ನಡೆಗೆ ಸಮ್ಮತಿ ಸೂಚಿಸುವ ಖಾತ್ರಿಯಿದೆ' ಎಂದು ಸಿನ್ಹಾ ಟ್ವೀಟಿಸಿದ್ದಾರೆ.
ಉನ್ನತ ಸ್ಥಾನದ ಹಂಬಲ...
ಪಟನಾದಲ್ಲಿ 1937ರಲ್ಲಿ ಜನಿಸಿದ ಯಶವಂತ್ ಸಿನ್ಹಾ, ಐಎಎಸ್ ಅಧಿಕಾರಿಯಾಗಿದ್ದವರು. ರಾಜಕೀಯ ಪ್ರವೇಶಿಸಿದ ಅವರು ಹಿಂದಿನಿಂದಲೂ ಉನ್ನತ ಸ್ಥಾನದ ಹಂಬಲ ಹೊತ್ತಿದ್ದವರು. 1989ರ ಡಿಸೆಂಬರ್‌ನಲ್ಲಿ ವಿ.ಪಿ.ಸಿಂಗ್ ಅವರ ಸಂಪುಟವು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದರು. ರಾಜ್ಯ ಖಾತೆ ಸಚಿವ ಸ್ಥಾನ ನೀಡಿರುವ ಬಗ್ಗೆ ಸಿಟ್ಟಾಗಿದ್ದರು. ಆಗ ಅವರು ಜನತಾ ದಳದಿಂದ ರಾಜ್ಯ ಸಭಾ ಸದಸ್ಯರಾಗಿದ್ದರು. ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಅವರನ್ನು ವಿ.ಪಿ.ಸಿಂಗ್ ಅವರು ರಾಜಕೀಯದಲ್ಲಿ ಕಡಿಮೆ ಅನುಭವ ಹೊಂದಿರುವವರೆಂದು ಪರಿಗಣಿಸಿದ್ದರು. ಆದರೆ, ಸಿನ್ಹಾ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅದನ್ನು ನಿರಾಕರಿಸಲಾಗಿತ್ತು.
1990ರ ನವೆಂಬರ್‌ನಲ್ಲಿ ಸಿನ್ಹಾ ತಮ್ಮ ನಿಷ್ಠೆಯನ್ನು ಚಂದ್ರ ಶೇಖರ್ ಕಡೆಗೆ ತೋರಿದರು. ಚಂದ್ರ ಶೇಖರ್ ಅವರು ಜನತಾ ದಳವನ್ನು ಒಡೆಯುವ ಮೂಲಕ ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು ಹಾಗೂ ವಿ.ಪಿ.ಸಿಂಗ್ ನಂತರ ದೇಶದ ಪ್ರಧಾನ ಮಂತ್ರಿಯಾದರು. ಕಾಂಗ್ರೆಸ್ ಬೆಂಬಲಿತ ಸರ್ಕಾರದಲ್ಲಿ ಸಿನ್ಹಾ ಅವರಿಗೆ ಹಣಕಾಸು ಖಾತೆ ನೀಡಲಾಯಿತು. ಆಗಿನ ಸರ್ಕಾರವು 1990ರ ನೆವಂಬರ್‌ನಿಂದ 1991ರ ಜೂನ್ ವರೆಗೆ ಅಲ್ಪಾವಧಿಯ ಆಡಳಿತ ನಡೆಸಿತು.
1991ರಲ್ಲಿ ಪಟನಾದಿಂದ ಎಸ್‌ಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಪಟನಾದಲ್ಲಿ ಉಂಟಾದ ಹಿಂಸಾಚಾರದಿಂದಾಗಿ ಚುನಾವಣೆಯನ್ನು ರದ್ದುಪಡಿಸಲಾಯಿತು. ಅನಂತರ ಸಿನ್ಹಾ ಅವರು 1995ರಲ್ಲಿ ರಾಂಚಿ ಸಮೀಪದ (ಅವಿಭಜಿತ ಬಿಹಾರದ) ಹಟಿಯಾದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದರು. ಅಲ್ಲಿಂದ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾದರು. ಆದರೆ, ಜೈನ್–ಹವಾಲಾ ಪ್ರಕರಣದಲ್ಲಿ ಸಿನ್ಹಾ ಅವರ ಹೆಸರು ತಳಕು ಹಾಕಿದ್ದರಿಂದ 1996ರಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಸ್ಥಾನವನ್ನು ಸುಶೀಲ್ ಮೋದಿ ವಹಿಸಿಕೊಂಡರು.
1999ರಲ್ಲಿ ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು ಬಿಜೆಪಿಯಲ್ಲಿ ಎಲ್.ಕೆ.ಅಡ್ವಾಣಿ ಅವರ ಬೆಂಬಲ ಪಡೆದರು. 1999ರಲ್ಲಿ ಮತ್ತೆ ಕೇಂದ್ರದ ಹಣಕಾಸು ಸಚಿವ ಸ್ಥಾನ ಪಡೆದರು. 2001–02ರಲ್ಲಿ ರಾಷ್ಟ್ರದಾದ್ಯಂತ ಯುಟಿಐ ಹಗರಣವು ಸಂಚಲನ ಮೂಡಿಸುವವರೆಗೂ ಅವರು ಸಚಿವ ಸ್ಥಾನದಲ್ಲಿದ್ದರು. 2002ರಲ್ಲಿ ಹಣಕಾಸು ಸಚಿವ ಸ್ಥಾನದಿಂದ ಸಿನ್ಹಾ ಅವರನ್ನು ತೆರವುಗೊಳಿಸಿ, ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನ ನೀಡಲಾಯಿತು.
2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು. ಬಳಿಕ 2009ರಲ್ಲಿ ಮತ್ತೆ ಲೋಕಸಭೆಗೆ ಪ್ರವೇಶ ಪಡೆದರು. ಐಎಎಸ್ ಅಧಿಕಾರಿಯಾಗಿದ್ದ ಅವರು 1984ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಅದಕ್ಕೂ ಮುನ್ನ 1970ರ ದಶಕದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.
ವಯಸ್ಸು 80 ದಾಟಿರುವ ಅವರು ದೇಶದ ಉನ್ನತ ಹುದ್ದೆಗಾಗಿ ಕೊನೆಯ ಹೋರಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.