ADVERTISEMENT

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಆಯ್ಕೆ

ಪಿಟಿಐ
Published 21 ಜೂನ್ 2022, 11:47 IST
Last Updated 21 ಜೂನ್ 2022, 11:47 IST
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ    

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರು ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷಗಳು ಈ ವಿಷಯವನ್ನು ಪ್ರಕಟಿಸಿವೆ.

ಸಂಸತ್ ಭವನದಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಕರೆದಿದ್ದ ವಿಪಕ್ಷಗಳ ಸಭೆಯಲ್ಲಿ ಅವಿರೋಧವಾಗಿ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿ ಎಂದು ಒಪ್ಪಿಕೊಳ್ಳಲಾಯಿತು

‘ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ಅವರನ್ನು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದನ್ನು ಘೋಷಿಸಲು ಸಂತಸವಾಗುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದರು.

ADVERTISEMENT

' ಅವರ ಸುದೀರ್ಘ ಸಾರ್ವಜನಿಕ ಜೀವನ ಮತ್ತು ವಿಶಿಷ್ಟ ವೃತ್ತಿಜೀವನದಲ್ಲಿ ಯಶವಂತ್ ಸಿನ್ಹಾ ಅವರು ವಿವಿಧ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಸಮರ್ಥ ಆಡಳಿತಗಾರರಾಗಿ, ನಿಪುಣ ಸಂಸದೀಯ ಮತ್ತು ಕೇಂದ್ರದ ಹಣಕಾಸು ಹಾಗೂ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು ಭಾರತೀಯ ಗಣರಾಜ್ಯ ಮತ್ತು ಸಂವಿಧಾನದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಅರ್ಹರಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶಕ್ಕೆ ಸಮರ್ಥ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವಂತೆ ಎಲ್ಲ ಪಕ್ಷಗಳಿಗೂ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

‘ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಮೋದಿ ಸರ್ಕಾರವು ಯಾವುದೇ ಗಂಭೀರ ಪ್ರಯತ್ನ ಮಾಡದಿರುವ ಬಗ್ಗೆ ವಿಷಾದವಿದೆ’ ಎಂದು ಜೈರಾಂ ರಮೇಶ್ ಹೇಳಿದ್ದಾರೆ.

ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ ಬಳಿಕ ಯಶವಂತ್ ಸಿನ್ಹಾ ಹೆಸರು ಮುನ್ನಲೆಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.