ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗಟ್‌ಪುರಿ ಪ್ರದೇಶದಲ್ಲಿ ಗೋರಕ್ಷಕರಿಂದ ಶುಕ್ರವಾರ ಮತ್ತೊಂದು ದಾಳಿ ನಡೆದಿದ್ದು, ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ತಿಂಗಳ 10ರಂದು ಇಂಥದ್ದೇ ಘಟನೆ ಜಿಲ್ಲೆಯಲ್ಲಿ ನಡೆದಿತ್ತು.
ಅಫಾನ್ ಅಬ್ದುಲ್ ಮಾಜಿದ್ ಅನ್ಸಾರಿ ಮತ್ತು ನಾಸಿರ್ ಶೇಕ್ ಎಂಬುವವರು ಅಹಮದ್‌ನಗರ ಜಿಲ್ಲೆಯಿಂದ ಮುಂಬೈಗೆ ಮಾಂಸ ಸಾಗಣೆ ಮಾಡುತ್ತಿದ್ದರು. ಈ ವೇಳೆ ಇಗಟ್‌ಪುರಿಯ ಘೋಟಿ– ಸಿನ್ನಾರ್ ರಸ್ತೆಯಲ್ಲಿ ಗುಂಪೊಂದು ಅವರನ್ನು ಅಡ್ಡಗಟ್ಟಿ ಥಳಿಸಿದೆ. ಅನ್ಸಾರಿ ಸ್ಥಳದಲ್ಲೇ ಮೃತಪಟ್ಟರೆ, ಶೇಕ್ ಗಂಭೀರವಾಗಿ ಗಾಯಗೊಂಡರು.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.
ಜೂನ್ 10ರ ಘಟನೆಯಲ್ಲಿ ಗೋವು ಸಾಗಾಟ ಮಾಡುತ್ತಿದ್ದ ಮೂವರನ್ನು ಗುಂಪೊಂದು ಥಳಿಸಿತ್ತು. ಮೂವರಲ್ಲಿ ಮೂವರಲ್ಲಿ ಒಬ್ಬ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ರೀತಿಯ ಘಟನೆಗಳ ಕಡೆಗೆ ಸರ್ಕಾರ ಏಕೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನಿಸಿದೆ.
‘ಥಳಿತದ ಎರಡೂ ಪ್ರಕರಣಗಳು ಆಘಾತ ತರಿಸಿವೆ. ಎರಡೂ ಘಟನೆಗಳು ಒಂದೇ ಜಿಲ್ಲೆಯಲ್ಲಿ ನಡೆದಿವೆ. ಶಿಂದೆ ಸರ್ಕಾರದಲ್ಲಿ ರಾಜ್ಯವು ಕಾನೂನಾತ್ಮಕ ಆಡಳಿತ ಹೊಂದಿದೆಯೇ ಅಥವಾ ಗೂಂಡಾ ರಾಜ್ ಹೊಂದಿದೆಯೇ’ ಎಂದು ಕಾಂಗ್ರೆಸ್ ಹಿರಿಯ ನಾಯಕ ನಸೀಮ್ ಖಾನ್ ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.