ನವದೆಹಲಿ: ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭದಲ್ಲಿ ರೈತರು ನಡೆದುಕೊಂಡ ರೀತಿಗೆ ನಾನು ತಲೆತಗ್ಗಿಸುತ್ತೇನೆ. ಜತೆಗೆ, ಹಿಂಸಾಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂಸಾಚಾರವು ಯಾವುದೇ ಪ್ರತಿಭಟನೆಯ ಮೇಲೆ ತಪ್ಪಾದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಯಾರು ಹಿಂಸಾಚಾರ ನಡೆಸಿದರು ಎಂದು ನಾನು ಹೇಳಲಾರೆ. ಆದರೆ, ನಾವು ಹಿಂಸಾಚಾರವನ್ನು ಪ್ರತಿಭಟನೆಯಿಂದ ಹೊರಗಿಟ್ಟಿದ್ದೇವೆ ಎಂದು ಭಾವಿಸಿದ್ದೇವೆ’ ಎಂದು ಹೇಳಿದ್ದಾರೆ.
‘ನಾವು ಕೈಗೊಂಡ ತೀರ್ಮಾನಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಯಾವುದೇ ಕಾರಣಕ್ಕೂ ದಾರಿತಪ್ಪಬಾರದು ಎಂದು ನಿರಂತರವಾಗಿ ಮನವಿ ಮಾಡಿದ್ದೇನೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಿದರೆ ಮಾತ್ರ ಆಂದೋಲನ ಯಶಸ್ವಿಯಾಗುತ್ತದೆ’ ಎಂದರು.
ಹಲವೆಡೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಸತತ ಎರಡು ತಿಂಗಳಿನಿಂದ ಶಾಂತಯುತವಾಗಿ ನಡೆಸಿದ ಆಂದೋಲನ ಇದೀಗ ಹದಗೆಟ್ಟಿದ್ದು, ಹಿಂಸಾಚಾರದ ಹಿಂದೆ ಸಮಾಜವಿರೋಧಿ ಶಕ್ತಿಗಳು ನುಸುಳಿವೆ ಎಂದು ಅವರು ಆರೋಪಿಸಿದರು.
ಹಿಂಸಾಚಾರದಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಂಧನಕ್ಕೆ ಆಗ್ರಹ: ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಅವರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ #ArrestYogendraYadav ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.