ಲಖನೌ: ವಿಐಪಿ ಸಂಸ್ಕೃತಿಯಿಂದ ದೂರವಿರುವಂತೆ ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಸೂಚನೆ ನೀಡಿದ್ದಾರೆ.
ಸಚಿವರ ಸಭೆ ನಡೆಸಿ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ‘ರಾಜ್ಯದ ಜನರನ್ನು ಭೇಟಿ ಮಾಡಿ, ಸಂವಾದ, ಸಮನ್ವಯ ಹಾಗೂ ಸಂವೇದನಾಶೀಲ ಎಂಬ ಸರ್ಕಾರದ ಮೂರು ಮಂತ್ರಗಳನ್ನು ನೀಡಬೇಕು. ಸರ್ಕಾರ ಇರುವುದು ಜನರಿಗಾಗಿ ಹಾಗೂ ಅವರ ಹಿತಕ್ಕಾಗಿ. ಅಂಥ ಸಂದರ್ಭದಲ್ಲಿ, ಸಮಾಜದ ಕಟ್ಟಡ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಅವರ ಬೇಡಿಕೆ ಈಡೇರಿಸುವುದು ನಮ್ಮ ಗುರಿಯಾಗಿರಬೇಕು’ ಎಂದಿದ್ದಾರೆ.
‘ಜನರ ಬಳಿ ಹೋಗಿ ಅವರೊಂದಿಗೆ ಸಂವಾದ ನಡೆಸಿ. ನಿಮ್ಮ ಮಾತಿನಲ್ಲಿ ಸೌಜನ್ಯವಿರಲಿ. ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಪರಿಹರಿಸಿ. ಸಚಿವರಾಗಲೀ ಅಥವಾ ಯಾವುದೇ ಜನಪ್ರತಿನಿಧಿಯಾಗಲಿ ವಿಐಪಿ ಸಂಸ್ಕೃತಿಯನ್ನು ಮೊದಲು ಕೈಬಿಡಬೇಕು’ ಎಂದು ಎಚ್ಚರಿಸಿದ್ದಾರೆ.
ಕೇಂದ್ರದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆ ಹಾಗೂ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಕ್ಕೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಳೆದ 10 ವರ್ಷಗಳಲ್ಲಿ ಕೈಗೊಂಡ ಸಾಧನೆಗಳಿಗೆ ವ್ಯಾಪಕ ಪ್ರಚಾರ ನೀಡುವಂತೆಯೂ ಸಚಿವರಿಗೆ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕು. ಸರ್ಕಾರದ ನೀತಿ ಹಾಗೂ ನಿರ್ಧಾರಗಳು ಮತ್ತು ಸಕಾರಾತ್ಮಕ ಪರಿಣಾಮ ಬೀರಿದ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದೂ ನಿರ್ದೇಶಿಸಿದ್ದಾರೆ.
‘ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ಇಲಾಖಾವಾರು ಗುರಿಯನ್ನು ಹಾಕಿಕೊಳ್ಳಬೇಕು. ಅವುಗಳು ಸಾಧ್ಯವಾಗಿಸುವುದು ಆಯಾ ಸಚಿವರ ಹೊಣೆ. ಈ ಗುರಿ ಇಟ್ಟುಕೊಂಡೇ ಸಚಿವರು ಸಭೆ ನಡೆಸಿ, ಗುರಿಸಾಧನೆಗೆ ಶ್ರಮಿಸಬೇಕು. ಗಿಡಗಳನ್ನು ಹೆಚ್ಚಾಗಿ ನೆಡಲು ಕ್ರಮ ಕೈಗೊಳ್ಳಬೇಕು. ಶಾಲೆಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಲು ಹಾಗೂ ಕಾಯಿಲೆ ನಿಯಂತ್ರಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.