ಲಖನೌ:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಿದ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಹಿಂಸಾತ್ಮಕ ಪ್ರತಿಭಟನಾಕಾರನಿಗೂ ‘ಆಘಾತ’ ನೀಡಿ ಮೌನಕ್ಕೆ ಶರಣಾಗುವಂತೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
‘ಪ್ರತಿಯೊಬ್ಬ ದಂಗೆಕೋರರೂ ಮೌನವಾಗಿದ್ದಾರೆ. ಎಲ್ಲ ಉಪದ್ರವಿಗಳಿಗೂ ಆಘಾತವಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡ ಕಠಿಣ ಕ್ರಮದ ನಂತರ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಯಾರು ಹಾನಿ ಮಾಡಿದ್ದಾರೋ ಅವರೇ ಅದರ ನಷ್ಟ ತುಂಬಬೇಕು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಪ್ರತಿಯೊಬ್ಬ ಹಿಂಸಾತ್ಮಕ ಪ್ರತಿಭಟನಾಕಾರನೂ ಈಗ ಅಳಲಿದ್ದಾನೆ, ಯಾಕೆಂದರೆ ಉತ್ತರ ಪ್ರದೇಶದಲ್ಲಿ ಈಗ ಯೋಗಿ ಸರ್ಕಾರವಿದೆ’ ಎಂದು#TheGreat_CMYogi ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಯೋಗಿ ಆದಿತ್ಯನಾಥ್ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶದ ಹಲವೆಡೆ ಸುಮಾರು 21 ಜನ ಮೃತಪಟ್ಟಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಸರ್ಕಾರ ಅವರೇ ನಷ್ಟವನ್ನು ತುಂಬಿಕೊಡಬೇಕು ಎಂದು ಹೇಳಿತ್ತು. ಈ ವಿಚಾರ ಉಲ್ಲೇಖಿಸಿ ಯೋಗಿ ಆದಿತ್ಯನಾಥ್ ಕಚೇರಿ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.