ಲಖನೌ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶನಿವಾರ ಹೇಳಿದ್ದಾರೆ.
ಎಎಂಯುನ ಅಲ್ಪಸಂಖ್ಯಾತ ಸ್ಥಾನಮಾನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಆದಿತ್ಯನಾಥ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಅಜೀಜ್ ಬಾಷಾ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ 1967ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಏಳು ಸದಸ್ಯರಿದ್ದ ಪೀಠವು ಶುಕ್ರವಾರ ತೀರ್ಪು ನೀಡಿದೆ. ಅಲ್ಲದೇ, ಎಎಂಯುಗೆ ನೀಡಲಾಗಿರುವ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರಿಸುವ ಕುರಿತು ಹೊಸ ಪೀಠ ನಿರ್ಣಯಿಸಲಿದೆ ಎಂದೂ ಹೇಳಿದೆ.
ಅಲಿಗಢ ಜಿಲ್ಲೆಯ ಖೈರ್ ಪಟ್ಟಣದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ಎಎಂಯು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ. ಕೇಂದ್ರ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುತ್ತದೆ. ಆದರೆ, ಅಲ್ಪಸಂಖ್ಯಾತರಿಗೆ ಶೇ 50ರಷ್ಟು ಮೀಸಲಾತಿ ನೀಡಲು ಅಲ್ಲಿ (ಎಎಂಯು) ಸಿದ್ಧತೆ ನಡೆಯುತ್ತಿದೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೂ ಮೀಸಲಾತಿ ಸಿಗಬೇಕು’ ಎಂದರು.
‘ಸಮಾಜವಾದಿ ಪಕ್ಷ, ಬಿಎಸ್‌ಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದಾಗಿ ಅಲಿಗಢ ಮುಸ್ಲಿಂ ವಿ.ವಿಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ಸಿಗುತ್ತಿಲ್ಲ. ಈ ಪಕ್ಷಗಳು ಅನುಸರಿಸಿಕೊಂಡು ಬರುತ್ತಿರುವ ಮತ ಬ್ಯಾಂಕ್ ರಾಜಕೀಯವೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು.
‘ವಿರೋಧ ಪಕ್ಷಗಳು ನಿಮ್ಮ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿವೆ. ಈ ವಿಷಯದಲ್ಲಿ ಕುರುಡರಂತೆ ವರ್ತಿಸಬೇಡಿ. ನಾವು ಒಗ್ಗಟ್ಟಾಗಿ ಉಳಿಯದಿದ್ದರೆ ನಮ್ಮನ್ನು ಹತ್ಯೆ ಮಾಡಲಾಗುತ್ತದೆ’ ಎಂದರು.
ಶ್ರೀಕೃಷ್ಣ ಜನ್ಮಭೂಮಿ–ಈದ್ಗಾ ಮಸೀದಿ, ಕಾಶಿ ವಿಶ್ವನಾಥ ದೇವಸ್ಥಾನ–ಜ್ಞಾನವಾಪಿ ಮಸೀದಿ ವಿವಾದಗಳನ್ನು ಪ್ರಸ್ತಾಪಿಸಿದ ಯೋಗಿ, ‘ನಾವು ಒಗ್ಗಟ್ಟಾಗದ ಕಾರಣದಿಂದಲೇ ಈ ಎರಡು ವಿಚಾರಗಳಲ್ಲಿ ನಾವು ಅವಮಾನ ಅನುಭವಿಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.