ಲಖನೌ: ಹಿಂದೂಗಳು ಒಗ್ಗಟ್ಟಿನಿಂದ ಇರಬೇಕು, ಇಲ್ಲವಾದರೆ ಅವರು ಬಾಂಗ್ಲಾದೇಶದಲ್ಲಿ ಎದುರಾದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಆದಿತ್ಯನಾಥ ಅವರು ಬಹುಸಂಖ್ಯಾತ ಸಮುದಾಯದ ಮತಗಳನ್ನು ಧ್ರುವೀಕರಿಸುವ ಉದ್ದೇಶದಿಂದ ಈ ಮಾತು ಆಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಆಗ್ರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿರೋಧ ಪಕ್ಷಗಳು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಾಂಗ್ಲಾದೇಶದ ಪರಿಸ್ಥಿತಿ ನೋಡುತ್ತಿದ್ದೀರಲ್ಲವೇ... ಒಗ್ಗಟ್ಟಿನಿಂದ ಇದ್ದರೆ ಸುರಕ್ಷಿತವಾಗಿ ಇರುತ್ತೀರಿ... ಒಡಕು ಉಂಟಾದರೆ ನಿಮ್ಮನ್ನು ಕತ್ತರಿಸಿಹಾಕಲಾಗುತ್ತದೆ’ ಎಂದು ಔರಂಗಜೇಬನ ವಿರುದ್ಧ ಹೋರಾಡಿದ್ದ ದುರ್ಗಾದಾಸ್ ರಾಥೋರ್ ಪ್ರತಿಮೆ ಅನಾವರಣಗೊಳಿಸಿದ ನಂತರ ಆದಿತ್ಯನಾಥ ಹೇಳಿದರು.
ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ ಆದಿತ್ಯನಾಥ ಅವರು, ‘ಹಿಂದೂಗಳನ್ನು ವಿಭಜಿಸಲು ಯತ್ನಗಳು ನಡೆದಿವೆ. ಹಿಂದೂಗಳು ಒಗ್ಗಟ್ಟಿನಿಂದ ಇಲ್ಲದಿದ್ದರೆ ದುರ್ಬಲರಾಗುತ್ತಾರೆ’ ಎಂದು ಹೇಳಿದರು.
ಯೋಗಿ ಆದಿತ್ಯನಾಥ ಅವರ ಮಾತಿಗೆ ಚಾಟಿ ಬೀಸಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ‘ಯೋಗಿ ಅವರು ದೇಶದ ಪ್ರಧಾನಿಯಾಗಲು ಬಯಸಿದ್ದಾರೆ. ಆದರೆ ಅವರು ಪ್ರಧಾನಿಯ ಕೆಲಸ ಈಗ ಮಾಡಬಾರದು. ಯಾವ ದೇಶದ ಜೊತೆ ಸಂಬಂಧ ಬೆಳೆಸಬೇಕು ಎಂಬುದರ ತೀರ್ಮಾನ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಕಡೆಯಿಂದ ಆಗುತ್ತದೆ’ ಎಂದು ಹೇಳಿದ್ದಾರೆ. ‘ಆದಿತ್ಯನಾಥ ಅವರು ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಕೇಂದ್ರವು ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ಆದಿತ್ಯನಾಥ ಅವರು ಮಧ್ಯ ಪ್ರವೇಶಿಸಬಾರದು ಎಂಬುದನ್ನು ದೆಹಲಿಯವರು ತಿಳಿಸಿ ಹೇಳುತ್ತಾರೆ ಎಂದು ನಾನು ಆಶಿಸುತ್ತೇನೆ’ ಎಂದು ಅಖಿಲೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.