ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ಶಾಸಕಿ ರೇಖಾ ದೇವಿ ಕುರಿತು ‘ನೀವು ಮಹಿಳೆ, ನಿಮಗೆ ಏನೂ ಗೊತ್ತಿಲ್ಲ’ ಎಂದು ಹರಿಹಾಯ್ದಿದ್ದಾರೆ. ನಿತೀಶ್ ಕುಮಾರ್ ನಡೆಗೆ ಆರ್‌ಜೆಡಿ ತೀವ್ರ ಆಕ್ರೋಶ ಹೊರಹಾಕಿದೆ.
ತಿದ್ದುಪಡಿ ಮಾಡಿದ ಮೀಸಲಾತಿ ಕಾನೂನುಗಳನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಅಳವಡಿಸಿ ಕಾನೂನು ಪರಿಶೀಲನೆಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಧಾನಸಭೆ ವಿಪಕ್ಷ ನಾಯಕರು ಧರಣಿ ನಡೆಸಿದ್ದಾರೆ.
ಕೆಲವು ಮಹಿಳಾ ಶಾಸಕಿಯರು ನಿತೀಶ್ ಕುಮಾರ್ ಅವರನ್ನು ‘ಮೀಸಲಾತಿ ವಿರೋಧಿ’ ಎಂದು ಧಿಕ್ಕಾರ ಕೂಗುತ್ತಿದ್ದರು. ಇದರಿಂದ ಕೆರಳಿದ ಅವರು, ರೇಖಾ ದೇವಿ ಅವರತ್ತ ಬೆರಳು ತೋರಿಸಿ ‘ನಾನು ಅಧಿಕಾರಕ್ಕೆ ಬಂದ ನಂತರವೇ ಬಿಹಾರದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಕ್ಕಿತು ಎಂಬುದು ನಿಮಗೆ ತಿಳಿದಿದೆಯೇ? ನೀವು ಮಹಿಳೆ, ನಿಮಗೇನೂ ಗೊತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಂದು ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಏನೇ ಮಾಡಿದರೂ ಅದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ನಾವು ಸದನದಲ್ಲಿರುವುದು ನಮ್ಮ ನಾಯಕ ಲಾಲು ಪ್ರಸಾದ್ ಅವರಿಂದಲೇ ಹೊರತು ನಿತೀಶ್ ಕುಮಾರ್ ಅವರಿಂದಲ್ಲ. ಇಂದು ಸದನದಲ್ಲಿ ದಲಿತ ಶಾಸಕಿಯೊಬ್ಬರಿಗೆ ಅವಮಾನ ಮಾಡಿದ್ದಾರೆ. ಅವರಿಗೆ (ಸಿಎಂ) ಮನಸ್ಸಿನ ಮೇಲೆ ಹಿಡಿತವಿಲ್ಲ ಎಂದು ತೋರುತ್ತದೆ’ ಎಂದು ಶಾಸಕಿ ರೇಖಾ ದೇವಿ ಟೀಕಿಸಿದ್ದಾರೆ.
ನಿತೀಶ್ ಕುಮಾರ್ ವರ್ತನೆ ಖಂಡಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ರಾಬ್ರಿ ದೇವಿ, ‘ನಿತೀಶ್ ಕುಮಾರ್ ಅವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂಬುದು ಜನರಿಗೆ ಗೊತ್ತಿದೆ. ಅವರು ಇಂದು ವಿಧಾನಸಭೆಯಲ್ಲಿ ಏನೇ ಮಾಡಿದರೂ ಅದು ಮಹಿಳೆಯರಿಗೆ ಮಾಡಿದ ಅವಮಾನ. ಎನ್‌ಡಿಎ ನಾಯಕರು ಮಹಿಳೆಯರನ್ನು ಗೌರವಿಸುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.