ADVERTISEMENT

3 ಬಾರಿ ಮಗಳನ್ನು ಗೆಲ್ಲಿಸಿದ್ದೀರಿ, ಈಗ ಸೊಸೆಯನ್ನು ಗೆಲ್ಲಿಸಿ: ಅಜಿತ್ ಪವಾರ್

ಪಿಟಿಐ
Published 10 ಏಪ್ರಿಲ್ 2024, 16:34 IST
Last Updated 10 ಏಪ್ರಿಲ್ 2024, 16:34 IST
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್
ಪಿಟಿಐ ಚಿತ್ರ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪಿಟಿಐ ಚಿತ್ರ   

ಪುಣೆ: ‘ಶರದ್ ಪವಾರ್ ಅವರ ಮಗಳನ್ನು ಮೂರು ಬಾರಿ ಗೆಲ್ಲಿಸಿದ್ದೀರಿ. ಈ ಬಾರಿ ಅವರ ಸೊಸೆಯನ್ನು ಗೆಲ್ಲಿಸಿ..’ 

– ಹೀಗೆ ಚುನಾವಣಾ ಪ್ರಚಾರ ನಡೆಸಿದವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್. ಬಾರಾಮತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪತ್ನಿ ಸುನೇತ್ರಾ ಪವಾರ್ ಪರವಾಗಿ ಅಜಿತ್ ಬುಧವಾರ ಮತ ಯಾಚನೆ ಮಾಡಿದರು. 

ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಎನ್‌ಸಿಪಿಯ (ಶರದ್ ಪವಾರ್ ಬಣ) ಅಭ್ಯರ್ಥಿಯಾಗಿ ಸುಪ್ರಿಯಾ ಸುಳೆ ಸ್ಪರ್ಧಿಸಿದ್ದಾರೆ. ಬಾರಾಮತಿ ಕ್ಷೇತ್ರವು ಪವಾರ್ ಕುಟುಂಬದ ಭದ್ರಕೋಟೆ ಎಂದೇ ಹೆಸರಾಗಿದೆ. ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಮೂರು ಬಾರಿ ಇಲ್ಲಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. 

ADVERTISEMENT

ಶರದ್ ಪವಾರ್ ಅವರೊಂದಿಗೆ ಹಿಂದೆ ಎನ್‌ಸಿಪಿಯಲ್ಲಿದ್ದ ಅವರ ಸಹೋದರನ ಮಗ ಅಜಿತ್ ಪವಾರ್ ಅವರು ಏಕನಾಥ ಶಿಂದೆ ಜತೆ ಸೇರಿ, ಈಗ ಉಪಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿ ಬಾರಾಮತಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎನ್‌ಸಿಪಿ ಅಭ್ಯರ್ಥಿಯಾಗಿ ಅಜಿತ್ ಅವರ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸಿದ್ದಾರೆ. ಹೀಗಾಗಿ ಕಣದಲ್ಲಿ ಪವಾರ್ ಕುಟುಂಬದ ಸದಸ್ಯರ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ.           

ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಪವಾರ್, ‘ಬಹಳ ಕಾಲದಿಂದಲೂ ನೀವು ಪವಾರ್ ಅವರ ಜತೆಗಿದ್ದೀರಿ. ಈಗ ಪವಾರ್ ಕುಟುಂಬದವರೇ ಇಬ್ಬರು ಕಣದಲ್ಲಿರುವುದರಿಂದ ಏನು ಮಾಡಬೇಕೆಂದು ನಿಮಗೆ ಅನ್ನಿಸುತ್ತಿರಬಹುದು. ಯಾರಿಗೆ ಮತ ಹಾಕಬೇಕು ಎಂದು ನಿಮಗೆ ಯೋಚನೆಯಾಗಿರಬೇಕು. ಇಷ್ಟು ದಿನ ಪವಾರ್ ಜತೆಗಿದ್ದ ನೀವು ಈಗ ಇನ್ನೊಬ್ಬ ಪವಾರ್‌ಗೆ (ಸುನೇತ್ರಾ ಪವಾರ್) ಮತ ಹಾಕಿ’ ಎಂದು ತಮ್ಮ ಪತ್ನಿ ಪರವಾಗಿ ಪ್ರಚಾರ ಮಾಡಿದರು.     

‘1991ರ ಚುನಾವಣೆಯನ್ನು ನೆನಪಿಸಿಕೊಳ್ಳಿ. ಆಗ ನೀವು ಮಗನನ್ನು (ಅಂದರೆ ನನ್ನನ್ನು) ಗೆಲ್ಲಿಸಿದ್ದೀರಿ. ನಂತರ ಅಪ್ಪನನ್ನು, ಅಂದರೆ ಪವಾರ್ ಸಾಹೇಬರನ್ನು, ಗೆಲ್ಲಿಸಿದ್ದೀರಿ. ಅದಾದ ಮೇಲೆ ಮಗಳನ್ನು, ಅಂದರೆ ಸುಪ್ರಿಯಾ ಸುಳೆ ಅವರನ್ನು ಮೂರು ಬಾರಿ ಆಯ್ಕೆ ಮಾಡಿದ್ದೀರಿ. ಈಗ ಸೊಸೆ (ಸುನೇತ್ರಾ ಪವಾರ್) ಅವರನ್ನು ಗೆಲ್ಲಿಸಿ. ಆಗ ಎಲ್ಲವೂ ಸಮತೋಲನವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.