ಮುಂಬೈ: ‘ಲೋಕಸಭೆ ಚುನಾವಣೆಯಲ್ಲಿ ‘ಸಾಹೇಬ’ರಿಗೆ (ಶರದ್ ಪವಾರ್) ಖುಷಿ ಪಡಿಸಿದ್ದೀರಿ. ಈ ಚುನಾವಣೆಯಲ್ಲಿ ನನಗೆ ಖುಷಿ ಪಡಿಸಿ’ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದರು.
ಎನ್‌ಸಿಪಿ (ಅಜಿತ್ ಬಣ) ಮುಖ್ಯಸ್ಥರು ಆದ ಅಜಿತ್ ಪವಾರ್ ಅವರು, ‘ನಿಯಮಗಳನ್ನು ಮೀರಿ ಬಾರಾಮತಿ ಕ್ಷೇತ್ರದ ಜನರಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ನಾನು ಒತ್ತು ನೀಡಿದ್ದೇನೆ’ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಎನ್‌ಸಿಪಿ ನಾಯಕ ಶರದ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಪರಾಭವಗೊಂಡಿದ್ದರು.
ಎನ್‌ಸಿಪಿ ವಿಭಜನೆಗೆ ಕಾರಣರಾಗಿದ್ದ ಅಜಿತ್ ಪವಾರ್ ಕಳೆದ ವರ್ಷ ಜುಲೈ ತಿಂಗಳಲ್ಲಿ ಏಕನಾಥ ಶಿಂದೆ ನೇತೃತ್ವದ ಮೈತ್ರಿ ಸರ್ಕಾರವನ್ನು ಸೇರಿದ್ದರು. ಬಾರಾಮತಿ ಲೋಕಸಭೆ ಕ್ಷೇತ್ರ ವ್ಯಾಪ್ತಿ ಅದೇ ಹೆಸರಿನ ವಿಧಾನಸಭೆ ಕ್ಷೇತ್ರದಲ್ಲಿ ಈಗ ಅಜಿತ್ ಪವಾರ್ ಸ್ಪರ್ಧಿಸುತ್ತಿದ್ದಾರೆ.
ನವೆಂಬರ್ 20ರಂದು ಚುನಾವಣೆಯ ನಡೆಯಲಿದ್ದು, ಪ್ರಮುಖ ಕ್ಷೇತ್ರ ಎಂದೇ ಗುರುತಿಸಲಾಗಿರುವ ಇಲ್ಲಿ ಅವರ ವಿರುದ್ಧ ಅವರ ಸಂಬಂಧಿಯೇ ಆಗಿರುವ ಯುಗೇಂದ್ರ ಪವಾರ್ ಕಣದಲ್ಲಿದ್ದಾರೆ.ಯುಗೇಂದ್ರ ನಾಮಪತ್ರ ಸಲ್ಲಿಸುವಾಗ ಶರದ್ ಪವಾರ್, ಸುಪ್ರಿಯಾ ಸುಳೆ ಸಾಥ್ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.