ಪಟ್ನಾ: ಬಿಹಾರದ ಯುವ ಸಂಸದೆ ಶಾಂಭವಿ ಚೌಧರಿ ಅವರು ತಮ್ಮ ಐದೂ ವರ್ಷದ ಸಂಬಳವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುತ್ತೇನೆ ಎಂದು ತಿಳಿಸಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿಯಿಂದ ಶಾಂಭವಿ ಚೌಧರಿ ಅವರು ಬಿಹಾರದ ಸಮಸ್ಠಿಪುರದ ಸಂಸದೆಯಾಗಿದ್ದಾರೆ.
26 ವರ್ಷದ ಅವರು ಪ್ರಸ್ತುತ ಲೋಕಸಭೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎನಿಸಿಕೊಂಡು ಗಮನ ಸೆಳೆದಿದ್ದಾರೆ.
‘ಶಿಕ್ಷಣದಿಂದ ಸಮಸ್ಠಿಪುರದ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಹಣಕಾಸಿನ ಅಡಚಣೆಯಿಂದ ಶಿಕ್ಷಣವನ್ನು ಮೊಟಕುಗೊಳಿಸಲು ಅಣಿಯಾಗುವ ಹೆಣ್ಣುಮಕ್ಕಳ ಸಹಾಯಕ್ಕಾಗಿ ನಾನು ನಿಲ್ಲುತ್ತೇನೆ. ಸಂಸದೆಯಾಗಿ ನಾನು ಪಡೆಯುವ ಐದೂ ವರ್ಷದ ಸಂಬಳವನ್ನು ಇದಕ್ಕಾಗಿ ಮೀಸಲಿಡುತ್ತೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಹಾರ ಸರ್ಕಾರ ಇತ್ತೀಚೆಗೆ ಸಮಸ್ಠಿಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಶಾಂಭವಿ ಚೌಧರಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಶಾಂಭವಿ ಅವರ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಸಚಿವರಾಗಿರುವ ಅಶೋಕ್ ಚೌಧರಿ ಅವರ ಮಗಳಾಗಿರುವ ಶಾಂಭವಿ, ಕಳೆದ ಲೋಕಸಭಾ ಚುನಾವಣೆಯಲ್ಲಿ 1.87 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.