ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ತೀಕ್ಷ್ಣ ತಿರುಗೇಟು ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಎರಡನೇ ಬಾರಿ ಕೇವಲ ಮೌನ ಮತ್ತು ಮುಗುಳ್ನಗೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
2011ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ(ಐಎಫ್‌ಎಸ್) ಅಧಿಕಾರಿ ಸ್ನೇಹಾ ದುಬೆ ಅವರು ವಿಶ್ವಸಂಸ್ಥೆಯಲ್ಲಿ ನೇರವಾಗಿ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿದ್ದರು. ಅಗ್ನಿಶಾಮಕ ವೇಷ ಧರಿಸಿರುವ ಪಾಕಿಸ್ತಾನ ಉಗ್ರರಿಗೆ ಮುಕ್ತ ವಾತಾವರಣ ಕಲ್ಪಿಸುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಗುಡುಗಿದ್ದರು.
ಸ್ನೇಹ ದುಬೆ ಅವರ ತೀಕ್ಷ್ಣ ಮಾತುಗಳಿಗೆ ಭಾರಿ ಶ್ಲಾಘನೆ ವ್ಯಕ್ತಗೊಂಡ ಬೆನ್ನಲ್ಲೇ ಭಾರತದ ಖಾಸಗಿ ವಾಹಿನಿಯೊಂದರ ಸುದ್ದಿ ನಿರೂಪಕಿ ಅವರ ಕಚೇರಿಗೆ ಭೇಟಿ ನೀಡಿ, ಅವರನ್ನು ಹೊಗಳುತ್ತ ಪ್ರತಿಕ್ರಿಯಿಸುವಂತೆ ಮೈಕ್ ಹಿಡಿದಾಗ ಮೌನ ಮತ್ತು ಮುಗುಳ್ನಗುವಿನ ಉತ್ತರ ನೀಡಿದರು. ಕಾಗದ ಪತ್ರಗಳ ಪರಿಶೀಲನೆಯಲ್ಲಿ ಕಾರ್ಯಮಗ್ನರಾಗಿದ್ದ ದುಬೆ, ನಿರೂಪಕಿಗೆ ಎದ್ದು ನಿಂತು ಕೈ ಮುಗಿದು, ಬಾಗಿಲಿನತ್ತ ದಾರಿ ತೋರಿಸಿ ತೆರಳುವಂತೆ ವಿನಂತಿಸಿಕೊಂಡರು.
ಸ್ನೇಹಾ ದುಬೆ ಅವರ ಸ್ನೇಹಪೂರ್ವಕ ನಡೆಯ ವಿಡಿಯೊ ವೈರಲ್ ಆಗಿದ್ದು, ಭಾರಿ ಸಂಖ್ಯೆಯ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಗೋವಾ ಮತ್ತು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಓದಿರುವ ಸ್ನೇಹಾ ದುಬೆ ಅವರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 12ರ ಬಾಲಕಿಯಾಗಿದ್ದಾಗಲೇ ವಿದೇಶಾಂಗ ಸೇವೆಗೆ ಸೇರಬೇಕು ಎಂಬ ಕನಸು ಕಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.