ADVERTISEMENT

ಯುವಜನರ ಆಶೋತ್ತರ ಹೊಸಕಿದ ಕೇಂದ್ರ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಪಿಟಿಐ
Published 13 ನವೆಂಬರ್ 2023, 14:40 IST
Last Updated 13 ನವೆಂಬರ್ 2023, 14:40 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯುವಜನರ ಆಶೋತ್ತರಗಳನ್ನು ಹೊಸಕಿಹಾಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ.

ಮೋದಿ ಅವರು ತೆಲಂಗಾಣದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ವೇಳೆ ಯುವತಿಯೊಬ್ಬಳು ವಿದ್ಯುತ್‌ ಕಂಬವೇರಿ, ಅವರಿಗೆ ಏನನ್ನೋ ಹೇಳಲು ಪ್ರಯತ್ನಿಸಿದ್ದಳು. ಈ ಘಟನೆಯನ್ನು ಉಲ್ಲೇಖಿಸಿ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಯುವಜನರು ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಆದರೆ, ಮೋದಿ ನೇತೃತ್ವದ ಸರ್ಕಾರವು ಕಳೆದ 45 ವರ್ಷಗಳ ಅತಿಹೆಚ್ಚಿನ ನಿರುದ್ಯೋಗ ‍ಪ್ರಮಾಣವನ್ನು ಕರುಣಿಸಿತು’ ಎಂದು ಖರ್ಗೆ ಅವರು ‘ಎಕ್ಸ್‌’ನ ಪೋಸ್ಟ್‌ ಮೂಲಕ ವ್ಯಂಗ್ಯವಾಡಿದ್ದಾರೆ. 

ಯುವಜನರು ಆರ್ಥಿಕ ಸಬಲೀಕರಣವನ್ನು ಎದುರು ನೋಡುತ್ತಿದ್ದರು. ಅದಕ್ಕೆ ಬದಲಾಗಿ ಸರ್ಕಾರವು ಬೆಲೆ ಏರಿಕೆಯ ಬಿಸಿ ಮುಟ್ಟಿಸಿತು. ಇದರಿಂದಾಗಿ ಜನರ ಉಳಿತಾಯವು 47 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಅವರು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಬಯಸಿದ್ದರು. ಆದರೆ ಮೋದಿ ನೇತೃತ್ವದ ಸರ್ಕಾರವು ದೇಶ ಹಿಂದೆಂದೂ ಕಾಣದ ಆರ್ಥಿಕ ಅಸಮಾನತೆ ಸೃಷ್ಟಿಸಿತು. ಮಧ್ಯಮ ವರ್ಗ ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ, ದೇಶದ ಒಟ್ಟು ಆಸ್ತಿಯಲ್ಲಿ ಶೇ 60ರಷ್ಟು ಆಸ್ತಿಯು ಶೇ 5ರಷ್ಟು ಮಂದಿ ಶ್ರೀಮಂತರ ಬಳಿ ಇದೆ ಎಂದು ಹೇಳಿದ್ದಾರೆ.

ದೇಶದ ಯುವಕರು ಸೌಹಾರ್ದ ಮತ್ತು ಏಕತೆ ಬಯಸಿದ್ದರು. ಆದರೆ ಅವರಿಗೆ ಸಿಕ್ಕಿದ್ದು ದ್ವೇಷ ಮತ್ತು ಒಡಕು ಎಂದು ಖರ್ಗೆ ಅವರು ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.