ADVERTISEMENT

‘ಕಾಂಗ್ರೆಸ್‌ನ ಕಿರಿಯರಂತೆ ಹಿರಿಯರಿಗೂ ಬದ್ಧತೆ ಇಲ್ಲ’

ಆನಂದ್ ಮಿಶ್ರಾ
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST
ಎಸ್‌.ಎಂ.ಕೃಷ್ಣ
ಎಸ್‌.ಎಂ.ಕೃಷ್ಣ   

2014ರ ನಂತರ ಕಾಂಗ್ರೆಸ್‌ ತೊರೆದ ಮುಖಂಡರ ಪಟ್ಟಿ ಮಾಡಿದರೆ, ಹಿರಿಯರಾಗಲಿ, ಕಿರಿಯರಾಗಲಿ ಕಾಂಗ್ರೆಸ್‌ನ ಮುಖಂಡರಲ್ಲಿ ಯಾರಿಗೂ ಸೈದ್ಧಾಂತಿಕ ಬದ್ಧತೆ ಇಲ್ಲ ಎಂಬುದು ಗೊತ್ತಾಗುತ್ತದೆ.

‘ಕಾಂಗ್ರೆಸ್‌ನ ಯುವ ಮುಖಂಡರಿಗೆ ಸಿದ್ಧಾಂತದ ಬದ್ಧತೆ ಇಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಜಿತಿನ್ ಪ್ರಸಾದ ಅವರು ಬಿಜೆಪಿ ಸೇರಿದ ನಂತರ, ಯುವ ನಾಯಕರಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ ಎಂಬುದನ್ನು ಕಾಂಗ್ರೆಸ್ ಹಿರಿಯ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ. 2014ರ ನಂತರ ಕಾಂಗ್ರೆಸ್‌ ತೊರೆದ ಮುಖಂಡರ ಪಟ್ಟಿ ಮಾಡಿದರೆ,ಹಿರಿಯರಾಗಲಿ, ಕಿರಿಯರಾಗಲಿ ಕಾಂಗ್ರೆಸ್‌ನಮುಖಂಡರಲ್ಲಿ ಯಾರಿಗೂ ಸೈದ್ಧಾಂತಿಕ ಬದ್ಧತೆ ಇಲ್ಲ ಎಂಬುದು ಗೊತ್ತಾಗುತ್ತದೆ.

ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮರುದಿನವೇ ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ‘ಪ್ರಸಾದ ರಾಮ’ ಎಂಬ ಪದವನ್ನು ಬಳಸಿ ಟೀಕಿಸಿದ್ದಾರೆ. ‘ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದಾರೆ. ಜಿತಿನ್ ಅವರಿಗೆ ಬಿಜೆಪಿಯಲ್ಲಿ ಪ್ರಸಾದ ದೊರೆಯುತ್ತದೆಯೇ ಅಥವಾ ಇದು ಕೇವಲ ಉತ್ತರ ಪ್ರದೇಶ ಚುನಾವಣೆಯ ಗಿಮಿಕ್ಕೇ ಎಂಬುದು ಈಗಿನ ಪ್ರಶ್ನೆ. ಸಿದ್ಧಾಂತದ ಪ್ರಶ್ನೆಯೇ ಬರದಿದ್ದಾಗ, ಇಂತಹ ಪಕ್ಷಾಂತರವು ಸುಲಭವಾಗುತ್ತದೆ. ನನ್ನಿಂದ ಇಂತಹ ಬದಲಾವಣೆ ಸಾಧ್ಯವಿಲ್ಲ’ ಎಂದು ಕಪಿಲ್ ಸಿಬಲ್ ಅವರು ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ವೀರಪ್ಪ ಮೊಯ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಇಂತಹದ್ದೇ ಪ್ರಶ್ನೆಯನ್ನು ಎತ್ತಿದ್ದಾರೆ. ಕಾಂಗ್ರೆಸ್‌ನ ಕಾರ್ಯಕರ್ತರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಈ ಹಿಂದೆ ಪಕ್ಷವನ್ನು ತೊರೆದು, ಬಿಜೆಪಿ ಸೇರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾದ ಜ್ಯೋತಿರಾದಿತ್ಯ ಸಿಂಧಿಯಾ, ರಾಜಸ್ಥಾನ ಮುಖ್ಯಮಂತ್ರಿ ಜತೆ ಜಟಾಪಟಿ ನಡೆಸಿದ್ದ ಸಚಿನ್ ಪೈಲಟ್ ಮತ್ತು ಜಿತಿನ್ ಪ್ರಸಾದ ಅವರ ಚಿತ್ರಗಳಿರುವ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆದರೆ ಪಕ್ಷ ತೊರೆದ ಯುವ ಮುಖಂಡರಿಗಿಂತ, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಗಳಾಗಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಅನುಭವಿಸಿದ ಹಿರಿಯ ನಾಯಕರ ಪಟ್ಟಿಯೇ ದೊಡ್ಡದಿದೆ. ಈ ಪಟ್ಟಿಯನ್ನು ಗಮನಿಸಿದರೆ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲೂ ಸೈದ್ಧಾಂತಿಕ ಬದ್ಧತೆಯ ಕೊರತೆ ಇರುವುದು ಗೊತ್ತಾಗುತ್ತದೆ.

ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದ, ಪಕ್ಷದ ವಕ್ತಾರನಾಗಿದ್ದ ಮತ್ತು ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಟಾಮ್ ವಡಕ್ಕನ್ ಅವರು 2019ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.ಕೇಂದ್ರದಲ್ಲಿ ಸಚಿವರಾಗಿದ್ದ ಡಿ.ಪುರಂದೇಶ್ವರಿ, ಕೃಷ್ಣತೀರ್ಥ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕರಾಗಿದ್ದ ನಾರಾಯಣ ರಾಣೆ, ಮಣಿಪುರದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿದ್ದ ಎನ್‌.ಬಿರೇನ್ ಸಿಂಗ್, ಅಸ್ಸಾಂನಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಿಮಂತ ಬಿಸ್ವ ಶರ್ಮಾ ಅವರು ಈಗ ಬಿಜೆಪಿಯಲ್ಲಿದ್ದಾರೆ. ಬಿರೇನ್ ಸಿಂಗ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರು ಈಗ ಕ್ರಮವಾಗಿ ಮಣಿಪುರ ಮತ್ತು ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದ, ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಮತ್ತು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಸಹ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಐದು ಬಾರಿ ಮೇಘಾಲಯದ ಮುಖ್ಯಮಂತ್ರಿಯಾಗಿದ್ದ ಡಿ.ಡಿ.ಲಪಾಂಗ್ ಅವರು 2018ರಲ್ಲಿ ಪಕ್ಷ ತೊರೆದು ಎನ್‌ಪಿಪಿ ಸೇರಿದ್ದಾರೆ.

ಬಿಜೆಪಿಗೆ ಬಂದ ಜಿತಿನ್ ಪ್ರಸಾದ ಅವರನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಸ್ವಾಗತಿಸಿದ್ದಾರೆ. ಖಂಡು ಸಹ 2016ರಲ್ಲಿ ಕಾಂಗ್ರೆಸ್‌ನ 43 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ವಲಸೆ ಹೋಗಿದ್ದರು. ಅವರೀಗ ಅರುಣಾಚಲ ಪ್ರದೇಶ ಮುಖ್ಯಮಂತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.