ತಿರುವನಂತಪುರಂ: ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಮುಂಜಾನೆ ಕಾಂಗ್ರೆಸ್ ಯುವ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.
ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ಮೂವರು ಕಾರ್ಯಕರ್ತರು ಬೆಂಗಾವಲು ಪಡೆ ವಾಹನ ಅಲ್ಲಿಗೆ ಪ್ರವೇಶಿಸುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೆಡೆಗೆ ಕಪ್ಪು ಬಾವುಟ ಪ್ರದರ್ಶಿಸಿದರು ಮತ್ತು ಹಿಂದಕ್ಕೆ ತೆರಳುವಂತೆ ಘೋಷಣೆ ಕೂಗಿದರು. ಕೂಡಲೇ ಮೂವರನ್ನು ಬಂಧಿಸಲಾಯಿತು ಮತ್ತು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಕೇರಳಕ್ಕೆ ಭೇಟಿ ನೀಡಿದ್ದರು. ಅದಾದ ಬಳಿಕ ಮಂಗಳವಾರ ಥಾಲಿಪರಂಬದಲ್ಲಿನ ರಾಜರಾಜೇಶ್ವರ ದೇಗುಲ ಸೇರಿ ಕಣ್ಣೂರಿನಲ್ಲಿ ಎರಡು ದೇಗುಲಗಳಿಗೆ ತೆರಳಲು ಬಂದಿದ್ದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ 20 ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಇದನ್ನು ವರದಿ ಮಾಡಲು ಮಂಗಳೂರಿಗೆ ತೆರಳಿದ್ದ ಕೇರಳದ ಕೆಲ ಪತ್ರಕರ್ತರನ್ನು ಬಂಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದರು.
ಘಟನೆ ಕುರಿತಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನು ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.